ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಸಮಾಜಕ್ಕೆ ಕೊಡುವ ಪ್ರಜ್ಞೆ ಬಂದರೆ ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು
ಮಂಡ್ಯ ತಾಲೂಕಿನ ಸಿದ್ದಯ್ಯನ ಕೊಪ್ಪಲು ಬಳಿ ಇರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಮಿಮ್ಸ್ ರಕ್ಷನಿಧಿ ಕೇಂದ್ರ ಇವರ ವತಿಯಿಂದ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ ಎಂದು ಹೇಳಿದರು.
ರಕ್ತದ ಪೂರೈಕೆಗಾಗಿ ಜೂ.4 ರಿಂದ ಡಿಸೆಂಬರ್ 2023 ರ ಕೊನೆಯವರೆಗೆ ರಕ್ತದಾನ ಸಪ್ತಾಹ ಆಚರಣೆ ಮಾಡುವ ಮೂಲಕ ಅತಿ ಹೆಚ್ಚು ರಕ್ತದಾನ ಶಿಬಿರಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗುತ್ತಿದೆ ಎಂದರು.
ಬೌದ್ಧಿಕವಾಗಿ ಆರೋಗ್ಯ ಚೆನ್ನಾಗಿರಬೇಕಾದರೆ ಪ್ರತಿ ವರ್ಷ ಒಬ್ಬ ವ್ಯಕ್ತಿ ಕನಿಷ್ಠ ಮೂರು ಬಾರಿ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಅತಿ ಹೆಚ್ಚು ರಕ್ತದಾನ ಮಾಡುವುದರಲ್ಲಿ ಮಂಡ್ಯ ಜಿಲ್ಲೆ ಹೆಚ್ಚು ರಕ್ತದಾನ ಮಾಡುವ ಜಿಲ್ಲೆಯಾಗಿ ವರದಿಯಾಗಿದೆ. ಮಂಡ್ಯ ಮಿಮ್ಸ್ ನಲ್ಲಿ ಪ್ರತಿ ವರ್ಷ 1200 ರಿಂದ 1500 ಯೂನಿಟ್ ರಕ್ತದ ಅವಶ್ಯಕತೆ ಇದೆ. ತುರ್ತು ಸಂದರ್ಭದಲ್ಲಿ,ಅಪೌಷ್ಟಿಕಾಂಶ ಹಾಗೂ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಅದಕ್ಕಾಗಿ ರಕ್ತದಾನ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾವೇರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ಮಾತನಾಡಿ ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಸಾವು ನಡುವೆ ಹೋರಾಟ ಮಾಡುತ್ತಿರುವವರಿಗೆ ನೀವು ಕೊಡುವ ರಕ್ತ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಯುವಜನರು ರಕ್ತದಾನದ ಜೊತೆ ನೇತ್ರದಾನ,ಅಂಗಾಂಗ ದಾನ ಮಾಡುವುದರಲ್ಲೂ ತೊಡಗಿಸಿ ಕೊಂಡರೆ ಮಾನವ ಸಮಾಜಕ್ಕೆ ಸೇವೆ ಸಲ್ಲಿಸಬಹುದು. ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ತೋರಬೇಕು, ಸಸ್ಯ ಸಂಕುಲ ಉಳಿದರೆ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ,ನಿರ್ದೇಶಕ ಕೆ.ಟಿ.ಹನುಮಂತು, ಕಾವೇರಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಹೆಚ್.ಪಿ.ರಾಜು, ಪ್ರಾಂಶುಪಾಲ ಪ್ರೊ.ಎ.ಎಸ್.ಶ್ರೀಕಂಠಪ್ಪ, ಪ್ರೊ.ಸಿ.ಎಂ.ಸವಿತಾ ಸೇರಿದಂತೆ ಇತರರು ಹಾಜರಿದ್ದರು




