ಕೆ.ಆರ್.ಪೇಟೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಜೆಡಿಎಸ್ ಅಭ್ಯರ್ಥಿ ಕಡೆಯವರಿಂದ ಹಣ ಪಡೆದಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ವೈರಲ್ ಆಗಿರುವ ಆಡಿಯೋದ ಬಗ್ಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಅವರನ್ನು ವಿಚಾರಣೆ ನಡೆಸಿ, ಸತ್ಯಾಂಶವನ್ನು ಬಯಲು ಮಾಡಬೇಕೆಂದು ಆಗ್ರಹಿಸಿ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಪಕ್ಷದ ಮುಖಂಡರ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಅವರಿಗೆ ಸೋಮವಾರ ದೂರು ಸಲ್ಲಿಸಿತು.
ಮಂಡ್ಯನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆಗಮಿಸಿದ ಕೆ.ಆರ್.ಪೇಟೆ ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಎಂ.ಡಿ. ಕೃಷ್ಣಮೂರ್ತಿ, ಕೋಡಿ ಮಾರನಹಳ್ಳಿ ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ಮತ್ತು ನಾಗೇಂದ್ರ ಅವರ ನಿಯೋಗ, ಸುಳ್ಳು ಅಪಾದನೆ ಮಾಡಿ, ನಮ್ಮ ಸಾರ್ವಜನಿಕ ಬದುಕಿಗೆ ಚ್ಯುತಿ ತಂದಿರುವ ವ್ಯಕ್ತಿ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸ್ ವರಿಷ್ಟಾಧಿಕಾರಿಗಳು ಅಧೀನ ಅಧಿಕಾರಿಯಿಂದ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು.




