– ಶಿವಸುಂದರ್
ಕಳೆದ ಐದು ವರ್ಷಗಳಿಂದ ಬಜೆಟ್ ಭಾಷಣಗಳಲ್ಲೂ ಅನಗತ್ಯವಾಗಿ ಹಿಂದೂತ್ವ, ಹಿಜಾಬ್, ಮಠ, ಮಹಾಭಾರತ, ವಿಶ್ವಗುರು, ಭೈರಪ್ಪ, ನರೇಂದ್ರ ಮೋದಿ ಇತ್ಯಾದಿ ಸುಳ್ಳು-ದ್ವೇಷಗಳ ಕಥನವನ್ನೇ ಕೇಳಿ ರೋಸತ್ತಿದ್ದ ಕರ್ನಾಟಕದ ಜನರಿಗೆ ಸಹಜೀವನ, ಬಸವಣ್ಣ, ಕುವೆಂಫು, ಕಾರ್ನಾಡ್, ಒಳಗೊಳ್ಳುವ ಅಭಿವೃದ್ಧಿ ಇನ್ನಿತ್ಯಾದಿ ಸಂವಿಧಾನಿಕ ಆಶಯಗಳನ್ನು ಪುನರುಚ್ಚರಿಸಿದ ಸಿದ್ಧರಾಮಯ್ಯನವರ 14 ನೇ ಬಜೆಟ್ ಭಾಷಣ ಸಮಾಧಾನ ತರುವಂತಿತ್ತು.
ಆದರೆ ಅದು ಆಶಯಗಳಲ್ಲಿ ಮಾತ್ರ ಇತ್ತೋ? ಅಥವಾ ಮುಖ್ಯಮಂತ್ರಿಗಳು ಮುಂದಿಟ್ಟ ಬಜೆಟ್ಟಿನಲ್ಲೂ ಮೋದಿ ಅರ್ಥಿಕತೆಗೆ ಪರ್ಯಾಯವಾದ ಆರ್ಥಿಕ ದರ್ಶನವಿತ್ತೋ?
ಕಾಂಗ್ರೆಸ್ ಸರ್ಕಾರ ಈಡೆರಿಸಬೇಕಿರುವ ಐದು ಗ್ಯಾರಂಟಿಗಳ ಯೋಜನೆಗಳು ನರೇಂದ್ರ ಮೋದಿಯವರ ಮತ್ತು ಬಿಜೆಪಿಯವರ ಕಾರ್ಪೊರೇಟ್ ವಾದಿ ಆರ್ಥಿಕ ದರ್ಶನಕ್ಕಿಂತ ಭಿನ್ನ ಎಂಬುದು ಸರಿ. ಮತ್ತದು ಸ್ವಾಗತಾರ್ಹ.
ಆದರೆ ಈ ಗ್ಯಾರಂಟಿಗಳು ಜನಸಾಮಾನ್ಯರ ಎಡಜೋಬಿಗೆ ದುಡ್ಡು ತುಂಬಲು ಬಲಜೋಬಿನಿಂದ ತೆಗೆಯದಂತಾಗಬೇಕಿದ್ದರೆ ಗ್ಯಾರಂಟಿಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ಸಿದ್ಧರಾಮಯ್ಯನವರ ಸರ್ಕಾರ ಎಲ್ಲಿಂದ ಹೊಂದಿಸುತ್ತಾರೆಂಬುದೇ ಈ ಬಜೆಟ್ಟಿನಲ್ಲಿ ಜನಪರರು ಆತಂಕದಿಂದ ನಿರೀಕ್ಷಿಸುತ್ತಿದ್ದ ವಿಷಯವಾಗಿತ್ತು.
ಈ ನಿಟ್ಟಿನಲ್ಲಿ ಬೇಕಾದ ಸಂಪನ್ಮೂಲಗಳನ್ನು ಕ್ರೂಢೀಕರಣವನ್ನು ಮಾಡಿಕೊಳ್ಳುವುದಕ್ಕೆ ಜಿಎಸ್ಟಿ ಜಾರಿಯಾದ ಮೇಲೆ ರಾಜ್ಯ ಸರ್ಕಾರಕ್ಕೆ ವಿಶೇಷವಾದ ಅವಕಾಶಗಳೇನೂ ಇರಲಿಲ್ಲ. ಕೇಂದ್ರ ಸರ್ಕಾರಕ್ಕಾದರೆ ರಾಜ್ಯಗಳ ಜಿಎಸ್ಟಿ ಸಂಗ್ರಹಗಳಲ್ಲೂ ಪಾಲು ಸಿಗುವುದಲ್ಲದೆ, ರಾಜ್ಯ ಸರ್ಕಾರದ ಜೊತೆಗೆ ಹಂಚಿಕೊಳ್ಳದೆ ಪೆಟ್ರೋಲ್ ಇತ್ಯಾದಿಗಳ ಮೇಲೆ ಸೆಸ್ ಅನ್ನು ವಿಧಿಸುವ ಸಂಪೂರ್ಣ ಹಕ್ಕು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಮೋದಿ ಸರ್ಕಾರ ತನ್ನ ಪಾಲನ್ನು ಈ ಮೂಲಕ ಹೆಚ್ಚು ಮಾಡಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಅಮೆರಿಕ ಇನ್ನಿತ್ಯಾದಿ ದೇಶಗಳಲ್ಲಿ ಇರುವಂತೆ ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆ ಹಾಗೂ ಇನ್ನಿತರ ಪ್ರತ್ಯಕ್ಷ ತೆರಿಗೆಗಳನ್ನು ವಿಧಿಸುವ ಅಧಿಕಾರ ಭಾರತದಲ್ಲಿ ರಾಜ್ಯ ಸರ್ಕಾರಗಳಿಗಿಲ್ಲ. ಆ ಅಧಿಕಾರ ಕೂಡ ಭಾರತದಲ್ಲಿ ಕೇವಲ ಕೇಂದ್ರ ಸರ್ಕಾರದ್ದು. ಇದಲ್ಲದೆ ಮೋದಿ ಸರ್ಕಾರ ನೇಮಕ ಮಾಡಿದ 15 ನೇ ಹಣಕಾಸು ಅಯೋಗ ಕೇಂದ್ರ ಸರ್ಕಾರದ ತೆರಿಗೆಯಲ್ಲಿ ಕರ್ನಾಟಕ ರಾಜ್ಯದ ಪಾಲನ್ನು ಶೇ. 4.71 ರಿಂದ ಶೇ. 3.65ಕ್ಕೆ ಇಳಿಸಿದೆ. ಇವೆಲ್ಲದರ ಜೊತೆಗೆ ಕೇಂದ್ರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿರುವ ಅನುದಾನ ಮತ್ತು ಪರಿಹಾರಗಳನ್ನು ಕೂಡ ಬೊಮಾಯಿ ಸರ್ಕಾರ ಪಡೆದುಕೊಂಡಿಲ್ಲ. ಈಗಂತೂ ಮೋದಿ ಸರ್ಕಾರ ಅಕ್ಕಿ ವಿಷಯದಲ್ಲಿ ಮಾಡಿರುವುದನ್ನು ನೋಡಿದರೆ ಕರ್ನಾಟಕದ ಪಾಲನ್ನು ಇನ್ನೂ ನಿರಾಕರಿಸುವ ಎಲ್ಲಾ ಸಾಧ್ಯತೆಗಳೂ ಇದ್ದೇ ಇದೆ. .
ಹೀಗಾಗಿ ಸಿದ್ಧರಾಮಯ್ಯನವರು ಗ್ಯಾರಂಟಿಗಳಿಗೆ ಬೇಕಿರುವ ಹೆಚ್ಚುವರಿ 60,000 ಕೋಟಿಯನ್ನು ಸಂಗ್ರಹಿಸಲು ಇದ್ದ ದಾರಿಗಳು..
– ಸಾಲ (ಇದು ಸಾಮಾನ್ಯ ಜನರ ಮೇಲೆ ಮುಂದೂಡಿದ ತೆರಿಗೆಯೆಂದೇ ಅರ್ಥ),
-ಅಬ್ಕಾರಿ ಇನ್ನಿತಾದಿ ಪಾಪಿ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ (ಇದರಿಂದ ಪರೋಕ್ಷವಾಗಿ ಗ್ಯಾರಂಟಿಗಳ ಫ಼ಲಾನುಭವಿ ಕುಟುಂಬಗಳಿಗೆ ಹೊರೆಯಾಗುತ್ತದೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ),
– ಹೆಚ್ಚಿನ ಆರ್ಥಿಕ ಅನುದಾನಕ್ಕೆ ಕೇಂದ್ರದೊಡನೆ ಸಂಘರ್ಷ,
-ಆಡಳಿತಾತ್ಮಕ ವೆಚ್ಚದ ನಿಯಂತ್ರಣ (ಇದೂ ಕೂಡ ಯಾವುದರ ಮೇಲೆ ನಿಯಂತ್ರಣ ಎನ್ನುವುದರ ಮೇಲೆ ಗ್ಯಾರಂಟಿ ಫ಼ಲಾನುಬವಿಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೋ ಇಲ್ಲವೊ ಎಂಬುದು ತೀರ್ಮಾನವಾಗುತ್ತದೆ).
ಇದು ಯಾವುದನ್ನು ಮಾಡದೆಯೂ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಕೇವಲ ಪವಾಡದಿಂದ ಮಾತ್ರ ಸಾಧ್ಯವಿತ್ತು.
ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರ ಬಜೆಟ್ ಅನ್ನು ನೋಡಿದರೆ ಸಹಜವಾಗಿಯೇ ಬಜೆಟ್ಟಿನಲ್ಲಿ ಯಾವುದೇ ಪವಾಡಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಮೊದಲು ಬಜೆಟ್ಟಿನಲ್ಲಿ ಹೇಗೆ ಹಣ ಹೊಂದಿಸಲಾಗಿದೆ ಎಂಬುದನ್ನು ಗಮನಿಸೋಣ.
ಈ ವರ್ಷದ ಬಜೆಟ್ಟಿನ ಪ್ರಕಾರ ಸರ್ಕಾರ 3,24,478 ಕೋಟಿ ರೂ. ಸಂಪನ್ಮೂಲವನ್ನು ಸಂಗ್ರಹಿಸಲಿದ್ದು 3.24.747 ಕೋಟಿ ರೂ. ಗಳನ್ನು ವೆಚ್ಚ ಮಾಡಲಿದೆ. ಸರ್ಕಾರ ಸಂಗ್ರಹಿಸಲಿರುವ ಸಂಪನ್ಮೂಲಗಳಲ್ಲಿ ಸರ್ಕಾರ ತನ್ನ ಸ್ವಂತ ತೆರಿಗೆ, ಹೂಡಿಕೆಗಳಿಂದ ಬರುವ ಲಾಭ ಹಾಗೂ ಕೇಂದ್ರದಿಂದ ಬರುವ ಪಾಲು ಇತ್ಯಾದಿಗಳ ಮೂಲಕ 2.38.410 ಕೋಟಿ ಸಂಗ್ರಹಿಸುತ್ತಿದ್ದರೆ ಉಳಿದ 85.818 ಕೋಟಿಯನ್ನು ಸಾಲದ ಮೂಲಕ ಸಂಗ್ರಹಿಸಲಿದೆ.
ರಾಜ್ಯ ಸರ್ಕಾರ ನಿರೀಕ್ಷೆ ಮಾಡುತ್ತಿರುವ 2.38, 410 ಕೋಟಿಯಲ್ಲಿ 2,10,554 ಕೋಟಿ ತೆರಿಗೆ ಆದಾಯವಾಗಿದ್ದರೆ, 12,500 ಕೋಟಿ ತೆರಿಗೆಯೇತರ ಆದಾಯ ಹಾಗೂ ಕೇಂದ್ರದ ಅನುದಾನದ ನಿರೀಕ್ಷೆ 15,500 ಕೋಟಿರೂ.
ಆದರೆ ಇಷ್ಟು ಮೊತ್ತವನ್ನು ನಿಜಕ್ಕೂ ಕ್ರೂಢೀಕರಿಸಬಹುದೇ?
ಅದನ್ನು ಅರ್ಥ ಮಾಡಿಕೊಳ್ಳಲು ಕರ್ನಾಟಕದಲ್ಲಿ ತೆರಿಗೆ ಸಂಗ್ರಾಹದ ಪ್ರಮಾಣದದ ಏರಿಕೆಯ ಗತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಉದಾಹರಣೆಗೆ 2021 ರಲ್ಲಿ ಸಾಧಿಸಲಾದ ತೆರಿಗೆ ಆದಾಯ ಕೇವಲ 1.54 ಲಕ್ಷ ಕೋಟಿ ಮಾತ್ರ. 2022-23 ರ ಬಜೆಟ್ ಅಂದಾಜು ಇದ್ದದ್ದು 1.56 ಲಕ್ಷ ಕೋಟಿ. ಇದ್ದಕ್ಕಿದ್ದತೆ ಯಾವುದೇ ವಿವರಗಳಿಲ್ಲದೆ 2022-23ರ ತೆರಿಗೆ ಸಂಗ್ರಹದ ಪರಿಶ್ಕೃತ ಅಂದಾಜು 1.78 ಲಕ್ಷ ಕೋಟಿಗೆ ಏರಿದೆ. ಮತ್ತು ಈಗ 2023-24 ರ ಬಜೆಟ್ಟಿನಲ್ಲಿ ತೆರಿಗೆ ಆದಾಯದ ಅಂದಾಜನ್ನು 2.10 ಲಕ್ಷ ಕೋಟಿಗಳಿಗೆ ಏರಿಸಲಾಗಿದೆ.
ಸಾಮನ್ಯವಾಗಿ ತೆರಿಗೆ ಸಂಗ್ರಹದ ಏರಿಕೆಗಳು ವಾರ್ಷಿಕ ಹೆಚ್ಚೆಂದರೆ ಶೇ. 14 ರಷ್ಟು ಏರಬಹುದು ಎಂದು ಅಂದಾಜು ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಜಿಎಸ್ಟಿ ಯಿಂದ ರಾಜ್ಯಗಳಿಗೆ ತೆರಿಗೆ ಕೊರತೆ ಆದರೆ ಕೊಡುತ್ತಿದ್ದ ಪರಿಹಾರವನ್ನು ಕೂಡ ತೆರಿಗೆ ಸಂಗ್ರಹದಲ್ಲಿ ಶೇ. 14 ರಷ್ಟು ಏರಿಕೆ ಎಂಬ ಸರ್ವ ಸಮ್ಮತ ನಿಯಮವನ್ನೇ ಆಧರಿಸಿತ್ತು.
ಆದರೆ ಸಿದ್ಧರಾಮಯ್ಯನವರ ಬಜೆಟ್ಟಿನಲ್ಲಿ ತೆರಿಗೆ ಆದಾಯದ ಏರಿಕೆಯನ್ನು 2022 ರ ಬಜೆಟ್ಟಿಗೆ ಹೋಲಿಸಿದರೆ ಶೇ. 30 ಕ್ಕಿಂತ ಹೆಚ್ಚಿಗೆ ಏರಿಕೆ ಯಾಗಬಹುದೆಂಬ ನಿರೀಕ್ಷೆ ಮಾಡಿದಾರೆ. ಇದು ಸಾಧ್ಯವೇ?
ಇದನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಬೇಕೆಂದರೆ ಕರ್ನಾಟಕಕ್ಕೆ ಈ ತೆರಿಗೆ ಆದಾಯದಲ್ಲಿ ಪ್ರಮುಖವಾಗಿರುವ ಜಿಎಸ್ಟಿ ಮೂಲಗಳಿಂದ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಬಂದಿದೆ ಎಂದು ಹೋಲಿಸಬೇಕು.
2021 ರಲ್ಲಿ ಕರ್ನಾಟಕಕ್ಕೆ ಜಿಎಸ್ಟಿ ಮೂಲದಿಂದ ಬಂದ ತೆರಿಗೆ ಆದಾಯ 60,000 ಕೋಟಿ. 2022-23 ರಲ್ಲಿ ಅದು 62,000 ಕೋಟಿಯನ್ನು ತಲುಪಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಬಗೆಯ ವಿವರಣೆಗಳಿಲ್ಲದೆ ಈ ಬಜೆಟಿನಲ್ಲಿ 2022-23 ರ ಜಿಎಸ್ಟಿ ಸಂಗ್ರಹದ ಪರಿಶ್ಕೃತ ಅಂದಾಜನ್ನು 74,353 ಕೋಟಿಗಳಿ ಏರಿಸಲಾಗಿದೆ. ಮತ್ತು 2023-24 ರ ಸಾಲಿಗೆ ಜಿಎಸ್ಟಿ ಬಾಬತ್ತಿನಲ್ಲಿ ಕರ್ನಾಟಕಕ್ಕೆ 88.195 ಕೋಟಿಗಳಾಗಬಹುದೆಂದು ನಿರೀಕ್ಶಿಸಲಾಗಿದೆ.
ಅಂದರೆ 2022 ರ ಬಜೆಟ್ ಅಂದಾಜಿಗೆ ಹೋಲಿಸಿದಲ್ಲಿ ಶೇ. 42 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹ
ಹಾಗೂ
2022-23 ರ ಪರಿಶ್ಕೃತ ಅಂದಾಜಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿದೆ.
ಆದರೆ ದೇಶದಲ್ಲಿ ಒಟ್ಟಾರೆ ವರ್ಷದಿಂದ ವರ್ಷಕ್ಕೆ ಜಿಎಸ್ಟಿ ತೆರಿಗೆ ಸಂಗ್ರಹದ ಏರಿಕೆಯ ಗತಿ ಶೇ. 8-12 ಕ್ಕಿಂತ ಹೆಚ್ಚಿರದ ಸಂದರ್ಭದಲ್ಲಿ ಸಿದ್ಧರಾಮಯ್ಯನವರು ಅದರ ಎರಡು ಪಟ್ಟು ಹೆಚ್ಚಳದ ನಿರೀಕ್ಷೆ ಹೇಗೆ ಇಟ್ಟುಕೊಂಡಿದ್ದಾರೆ?
ಅದೇ ರೀತಿ ರಾಜ್ಯದ ಅಬ್ಕಾರಿ ತೆರಿಗೆ 29 ಸಾವಿರ ಕೋಟಿಯಿಂದ 36,ಸಾವಿರ ಕೋಟಿಗೆ ಹೆಚ್ಚು ಮಾಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರಿಂದ ಕುಡಿಯುವುದೇನೂ ಕಡಿಮೆಯಾಗದು ಎಂಬುದು ತಿಳಿದಿರುವ ವಿಷಯವೇ. ಸರ್ಕಾರದ ಉದ್ದೆಶವೂ ಅದಲ್ಲ.
ಅದೇ ರೀತಿ ಮೋಟಾರು ತೆರಿಗೆ, ಸ್ಟಾಮ್ಪ್ಸ್ ಮತ್ತು ಡ್ಯೂಟಿಸ್ ಇತ್ಯಾದಿಗಳ ಮೇಲೂ ಶೇ. 30 ರಷ್ಟು ಹೆಚ್ಚಳವನ್ನು ಮುಖ್ಯಮಂತ್ರಿಗಳು ನಿರೀಕ್ಷಿಸಿದ್ದಾರೆ.
ಆದರೆ ಇವೆಲ್ಲವೂ ಸಾಲ ಮಾಡದೆ , ಹೆಚ್ಚಿಗೆ ತೆರಿಗೆಯನ್ನು ತೋರಿಸದೆ ಗ್ಯಾರಂಟಿಗಳಿಗೆ ಸಂಪನ್ಮೂಲ ಸ್ಂಗ್ರಹಣೆ ಮಾಡಲಾಗಿದೆ ಎಂಬ ಸುಳ್ಳು ಸಮಾಧಾನವುಗುವುದಿಲ್ಲವೇ?
ಏಕೆಂದರೆ ಈ ಪ್ರಮಾಣದ ತೆರಿಗೆ ಸಂಗ್ರಹ ಆಗದಿದ್ದರೆ ಗ್ಯಾರಂತಿಗಳನ್ನು ಮುಂದುವರೆಸಲು ಒಂದು ಹೆಚ್ಚುವರಿ ಸಾಲವನ್ನೇ ಮಾಡಬೇಕು ಅಥವಾ ಇನ್ನೊಂದು ಘೋಷಿತ ಬಾಬತ್ತಿನಿಂದ ಕಿತ್ತು ಗ್ಯಾರಂಟಿಯನ್ನು ಪೂರೈಸಬೇಕು. ಅದು ಬಡಜನರ ಮೇಲೆ ಪರೋಕ್ಷ ಅಥವಾ ಮುಂದೂಡಿದ ತೆರಿಗೆಯೇ ಆಗುತ್ತದೆ.
ಇವುಗಳ ಬದಲಿಗೆ ಸಿದ್ಧರಾಮಯ್ಯನವರು ಏನು ಮಾಡಬಹುದಿತ್ತು?
ಐಷಾರಾಮಿ ವಾಹನಗಳ ಮೇಲೆ ರಸ್ತೆ ಶುಲ್ಕವನ್ನು ಹೆಚ್ಚು ಮಾಡಿ ಶಕ್ತಿ ಯೋಜನೆಗೆ ಬೇಕಾದ ಹಣ ಸಂಗ್ರಹಿಸಬಹುದಿತ್ತು. ಐಶರಾಮಿ ಹೊಟೆಲ್ ಅಥವಾ ರೆಸಾರ್ಟ್ ಗಳ ಮೇಲೆ ಅನ್ನಭಾಗ್ಯ ಸೇವಾ ತೆರಿಗೆಯನು ವಿಧಿಸಿ ಅನ್ನಭಾಗ್ಯಕ್ಕೆ ಬೇಕಿರುವ ಸಂಪನ್ಮೂಲವನ್ನು ಸಂಗ್ರಹಿಸಬಹುದ್ದಿತು..
ಇವು ಕೇವಲ ಕೆಲವು ಉದಾಹರಣೆಗಳಷ್ತೆ.
ಗ್ಯಾರಂತಿ ಯೋಜನೆಗಳು ಈ ಭಾರತದಲ್ಲಿ ಬಡಜನರು ಶ್ರೀಮಂತರಷ್ಟೇ ಹಕ್ಕುಳ್ಳ ನಾಗರಿಕರು ಎಂದು ಘ್ಹೋಷಿಸುವ ಯೋಜನೆಗಳು.
ಆದರೆ ಅದು ಯಶಸ್ವಿಯಾಗಬೇಕೆಂದರೆ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕಬೇಕು.
ಅಂದರೆ ಶ್ರೀಮಂತರ ಪರವಾದ ಕಾರ್ಪೊರೇಟ್ ಪರವಾದ ನವ ಉದಾರವಾದಿ ಆರ್ಥಿಕತೆಯ ಚೌಕಟ್ಟಿನಿಂದ ಹೊರಬರಬೇಕು
ಉತ್ತರ ಯುರೋಪಿನ ನಾರ್ವೆ, ಸ್ವೀಡನ್ ನಂಥ ಯಶಸ್ವಿ ಪ್ರಜಾತಂತ್ರಗಳಲ್ಲಿ ಸಿದ್ಧರಾಮಯ್ಯನವರ ಗ್ಯಾರಂಟಿಗಳಿಗೆ ಎರಡು ಪಟ್ಟು ಹೆಚ್ಚಿನ ಗ್ಯಾರಂತಿಗಳನ್ನು ಕೊಟ್ಟೂ ಯಶಸ್ವಿ ಅರ್ಥಿಕತೆಯಾಗುತ್ತಿರುವುದು ಏಕೆಂದರೆ ಅಲ್ಲಿ ಶ್ರೀಮಂತರ ಮೇಲೆ ತೆರಿಗೆ ಹಾಕಿ ಜನಸಾಮಾನ್ಯರಿಗೆ ಉಚಿತ ವಸತಿ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಲಾಗುತ್ತಿದೆ.
ಭಾರತದಲ್ಲಿ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕತೆಯ ಚೌಕಟ್ಟಿನೊಳಗೆ ಬಡವರಿಗೆ ಗ್ಯಾರಂಟಿಗಳು ಗ್ಯಾರಂತಿಯಾಗಲು ಸಾಧ್ಯವೇ?
ಬಡವರಿಗೆ ಅಕ್ಕಿ ಕೊಡುವ ಆಸೆ ಇದ್ದರೆ ಕಾರ್ಪೊರೇಟ್ ನಂಟರ ಮೇಲೆ ಪ್ರೀತಿ ಕಡಿಮೆ ಮಾಡಿಕೊಳ್ಳಬೇಕು
ಅಲ್ಲವೇ?




