ಜಿ.ಮಾದೇಗೌಡರು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡುತ್ತಿದ್ದರು. ಆದ್ದರಿಂದ ಸರ್ವಕಾಲಕ್ಕೂ ಸಲ್ಲುವ ಜನನಾಯಕ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಬಣ್ಣಿಸಿದರು.
ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ವತಿಯಿಂದ ಸೋಮವಾರ ಆಯೋಜಿಸಿದ್ದ 23ನೇ ವರ್ಷದ ರಾಜ್ಯಮಟ್ಟದ ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಡಾ.ಜಿ.ಮಾದೇಗೌಡರು ಯಾರಿಗೂ ಹೆದರುತ್ತಿರಲಿಲ್ಲ. ಜತೆಗೆ ನೇರ ನುಡಿಗೆ ಹೆಸರುವಾಸಿಯಾದವರು. ಆದರೆ ಇವತ್ತಿನ ರಾಜಕಾರಣದಲ್ಲಿ ಆ ರೀತಿ ಹೆಸರು ಗಳಿಸುವವರು ವಿರಳ ಎಂದರು.
ಜಿ.ಮಾದೇಗೌಡರಿಗೆ ಮಹಾತ್ಮ ಗಾಂಧೀಜಿ ಅವರ ಬಗ್ಗೆ ವಿಶೇಷ ಪ್ರೀತಿ, ಬದ್ಧತೆ ಇತ್ತು. ಈ ಕಾರಣಕ್ಕೆ ಅವರು ಗಾಂಧಿಭವನ ಸ್ಥಾಪನೆ ಮಾಡಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಸ್ವಾವಲಂಬಿಗಳಾಗಿ ಬದುಕಲಿಕ್ಕೆ ಸಹಕಾರ ನೀಡಿದ್ದರು. ಗಾಂಧೀಜಿ ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ಗೊತ್ತಾಗಲೆಂದು 20 ಎಕರೆ ಜಾಗವನ್ನು ಮಂಜೂರು ಮಾಡಿಸಿ ಗಾಂಧಿಗ್ರಾಮ ಸ್ಥಾಪನೆಗೆ ಮುಂದಾಗಿದ್ದರು. ಇಂತವರ ಹೆಸರಿನಲ್ಲಿ ಗಾಂಧಿವಾಧಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಜಿ.ಮಾದೇಗೌಡ ಅವರ ಹೆಸರು ಮುಂದಿನ ಪೀಳಿಗೆಗೆ ಸ್ಥಿರವಾಗಿ ಉಳಿಯಲು ಭತ್ತ ಅಥವಾ ರಾಗಿಗೆ ಜಿ.ಮಾದೇಗೌಡ ಅವರ ಹೆಸರು ಇಡಲು ಕೃಷಿ ಸಚಿವರು ಮುಂದಾಗಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಕೃಷಿ ಹಾಗೂ ಉಸ್ತುವಾರಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಪ್ರತಿಷ್ಠಾನ ಅಧ್ಯಕ್ಷ ಬಿ.ಬಸವರಾಜು, ಡಾ.ಜಿ.ಎಂ.ಪ್ರಕಾಶ್ ಇತರರಿದ್ದರು.
ಮಂಡ್ಯದ ಪಶುವೈದ್ಯ ಡಾ. ಕೆ.ಎಸ್.ಜಯರಾಂ ಅವರಿಗೆ ಜಿ.ಮಾದೇಗೌಡ ಸಮಾಜ ಸೇವಾ ಪ್ರಶಸ್ತಿ ಮತ್ತು ಪಿರಿಯಾಪಟ್ಟಣ ತಾಲೂಕು ಕೆ.ಬಸವನಹಳ್ಳಿ ಕುಳ್ಳೇಗೌಡ ಅವರಿಗೆ ಸಾವಯವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.




