Thursday, July 25, 2024

ಪ್ರಾಯೋಗಿಕ ಆವೃತ್ತಿ

ಇಂಗ್ಲೆಂಡ್ ಮೇಲೆ ಮುಯ್ಯಿ ತೀರಿಸಿಕೊಂಡ ಭಾರತ ಫೈನಲ್ ಗೆ

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್​​ಗಳಿಂದ ಗೆದ್ದು ಫೈನಲ್​ ಪ್ರವೇಶಿಸುವ ಮೂಲಕ ಕಳೆದ ವಿಶ್ವಕಪ್ ಸೋಲಿನ ಮುಯ್ಯಿ ತೀರಿಸಿಕೊಂಡಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಟೀಂ ಇಂಡಿಯಾ ಫೈನಲ್​ಗೇರಿದ ಸಾಧನೆ ಮಾಡಿದೆ. ಇದರ ಜೊತೆಗೆ ಅಜೇಯ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿರುವ ಟೀಂ ಇಂಡಿಯಾ, ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ 10 ವಿಕೆಟ್​ಗಳ ಹೀನಾಯ ಸೋಲಿಗೆ ಸರಿಯಾಗಿ ಸೇಡು ತೀರಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 171 ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದೀಗ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಮತ್ತೆ ಕೊಹ್ಲಿ ವಿಫಲ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಎಂದಿನಂತೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ 19 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟಾದರು. ಆ ಬಳಿಕ ರಿಷಬ್ ಪಂತ್ ಕೂಡ 4 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾ ಮೊದಲ 6 ಓವರ್​ಗಳಲ್ಲಿ 40 ರನ್​ ಕಲೆಹಾಕುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಆದರೆ ಆ ನಂತರ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಟೀಮ್ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ, ಈ ಇಬ್ಬರೂ 73 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

ರೋಹಿತ್- ಸೂರ್ಯ ಆಸರೆ
ರೋಹಿತ್ ಶರ್ಮಾ 57 ರನ್ ಗಳಿಸುವ ಮೂಲಕ 32ನೇ ಅರ್ಧಶತಕ ದಾಖಲಿಸಿದರೆ,ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿ ಭಾರಕ್ಕೆ ಆಸರೆಯಾದರು.ನಂತರ ರವೀಂದ್ರ ಜಡೇಜಾ ಔಟಾಗದೆ 17 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಬಾರಿಸಿದರೆ, ಅರ್ಷದೀಪ್ ಸಿಂಗ್ ಅಜೇಯ 1 ರನ್​ಗಳ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಬೌಲ್ ಮಾಡಿದ 6 ಬೌಲರ್​ಗಳ ಪೈಕಿ ನಾಲ್ವರು ತಲಾ 1 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ ಅತಿ ಹೆಚ್ಚು 3 ವಿಕೆಟ್ ಪಡೆದರು.

ಇಂಗ್ಲೆಂಡ್ ಪೆವಿಲಿಯನ್ ಪರೇಡ್

ಗೆಲುವಿಗೆ 171 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಮೊದಲ ವಿಕೆಟ್​ಗೆ 26 ರನ್​​ಗಳ ಜೊತೆಯಾಟ ಸಿಕ್ಕಿತು. ನಾಯಕ ಜೋಸ್ ಬಟ್ಲರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು.ಇಂಗ್ಲೆಂಡ್ ತಂಡದ ಪರ ಹ್ಯಾರಿ ಬ್ರೂಕ್ 25 ರನ್ ಬಾರಿಸಿ ಅಗ್ರ ಸ್ಕೋರರ್ ಎನಿಸಿಕೊಂಡರೆ, ಜೋಸ್ ಬಟ್ಲರ್ 23 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ವೇಗಿ ಜೋಫ್ರಾ ಆರ್ಚರ್ 21 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್ ಕೂಡ ಒಂದಂಕಿ ದಾಟಲಿಲ್ಲ. ಭಾರತದ ಪರ ಕುಲ್ದೀಪ್ ಯಾದವ್ 19 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 23 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಅವರು ಅಲರೌಂಡರ್ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!