ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ವಾರ್ಷಿಕವಾಗಿ ರಾಜ್ಯದ ಸಣ್ಣ ಹಿಡುವಳಿ ಕೃಷಿ ಕುಟುಂಬದವರಿಗೆ ನೀಡುತ್ತಿದ್ದ 4 ಸಾವಿರ ರೂ.ನೆರವು ಸ್ಥಗಿತಗೊಳಿಸುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರಿಯಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಸರ್ಕಾರ ರದ್ದುಗೊಳಿಸಬಾರದು ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಕೇಂದ್ರ ಸರ್ಕಾರ ₹6000 ಸಾವಿರ ಹಾಗೂ ರಾಜ್ಯ ಸರ್ಕಾರ ₹4000 ಸೇರಿ ಒಟ್ಟು 10 ಸಾವಿರ ರೂ.ಗಳನ್ನು ಸಣ್ಣ ಹಿಡುವಳಿದಾರರಿಗೆ ನೀಡಲಾಗುತ್ತಿತ್ತು. ಇದನ್ನು ಮುಂದುವರಿಸಬೇಕು, ಇಲ್ಲವಾದಲ್ಲಿ ರೈತರಿಗೆ ತೊಂದರೆಯಾಗುತ್ತದೆ ಎಂದರು.
ಇಂದಿನ ದುಬಾರಿ ವ್ಯವಸಾಯದ ಖರ್ಚು ವೆಚ್ಚಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ತಕ್ಕಮಟ್ಟಿಗೆ ಆರ್ಥಿಕ ಅನುಕೂಲ ನೀಡುತ್ತಿತ್ತು, ಇತ್ತೀಚೆಗೆ ರಾಜ್ಯಸರ್ಕಾರವು ಈ ಯೋಜನೆಯನ್ನು ಕಡಿತಗೊಳಿಸುವ ಬಗ್ಗೆ ಮುನ್ಸೂಚನೆಯನ್ನು ಕೊಟ್ಟಿದ್ದು, ಒಂದು ವೇಳೆ ಈ ಯೋಜನೆಯನ್ನು ಕೈ ಬಿಟ್ಟರೇ, ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಕೀಲಾರ ಎಸ್.ಕೃಷ್ಣ ಮುಖಂಡರಾದ ಶ್ರೀನಿವಾಸ್, ತುಳಸೀಧರ್ ಸೇರಿದಂತೆ ಮತ್ತಿತರರಿದ್ದರು.




