ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮಕ್ಕೆ ಸ್ವಾಧೀನ ಪಡಿಸಿಕೊಂಡಿದ್ದ ರೈತರಿಗೆ ಭೂಮಿಗೆ ಸೂಕ್ತ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ನ್ಯಾಯಾಲಯದ ಆದೇಶ ಮೇರೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಆಡಳಿತ ಕಚೇರಿ ಸಾಮಾಗ್ರಿಗಳನ್ನು ಜಪ್ತಿ ನಡೆಸಲು ಮುಂದಾದ ಘಟನೆ ಮಂಗಳವಾರ ನಡೆಯಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಹೋಬಳಿಗೆ ಸೇರಿದ ಪಾಲಹಳ್ಳಿ ಹಾಗೂ ಕರಿಮಂಟಿ ಗ್ರಾಮದ ಜಮೀನುಗಳನ್ನು ರಂಗನತಿಟ್ಟು ಪಕ್ಷಿಧಾಮ ಅಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಂಡಿದ್ದ ರೈತರಿಗೆ ಅಧಿಕಾರಿಗಳು ಭೂ ಪರಿಹಾರ ವಿತರಿಸದೇ ವಿಳಂಬ ಮಾಡಿದ್ದರಿಂದ ನೊಂದ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಶ್ರೀರಂಗಪಟ್ಟಣ ಹಿರಿಯ ಸಿವಿಲ್ ನ್ಯಾಯಾಲಯ ಆದೇಶದಂತೆ ಪಾಂಡವಪುರ ನ್ಯಾಯಾಲಯ ಸಿಬ್ಬಂದಿ ಪಾಂಡವಪುರ ಉಪವಿಭಾಗಾಧಿಕಾರಿ ಆಡಳಿತ ಕಚೇರಿಯ ಕಂಪ್ಯೂಟರ್, ಯುಪಿಎಸ್, ಬೆಂಚ್, ಚೇರ್ ಗಳು, ಟೇಬಲ್ ಸೇರಿದಂತೆ ಕಚೇರಿಯ ಇತರೆ ಸಾಮಾಗ್ರಿಗಳನ್ನು ಜಪ್ತಿ ಮಾಡಲು ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ರೈತ ಶ್ರೀನಿವಾಸ್ ಸಮ್ಮುಖದಲ್ಲಿ ಮುಂದಾಗಿದ್ದರು. ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಕಚೇರಿಯಲ್ಲಿ ಇರಲಿಲ್ಲವಾದ್ದರಿಂದ ಗ್ರೇಡ್- 2 ತಹಶೀಲ್ದಾರ್ ಸತ್ಯನಾರಾಯಣ ಅವರಿಗೆ ನ್ಯಾಯಾಲಯ ಆದೇಶ ಪ್ರದರ್ಶಿಸಿ ಜಪ್ತಿ ಮಾಡಲು ಮುಂದಾದರು. ಈ ವಿಷಯ ಉಪವಿಭಾಗಾಧಿಕಾರಿಗೆ ತಿಳಿದು ದೂರವಾಣಿ ಮೂಲಕ ರೈತ ಶ್ರೀನಿವಾಸ್ ಜೊತೆ ದೂರವಾಣಿ ಮಾತನಾಡಿ ಜು.15 ರೊಳಗೆ ನ್ಯಾಯಾಲಯಕ್ಕೆ ಪರಿಹಾರ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ರೈತ ಶ್ರೀನಿವಾಸ್ ಒಪ್ಪಿದ್ದರಿಂದ ಜಪ್ತಿ ನಿರ್ಧಾರ ವಾಪಸ್ಸು ಪಡೆಯಲಾಯಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮ ಅಭಿವೃದ್ಧಿಗಾಗಿ ಪಾಲಹಳ್ಳಿ, ಕರೀಮಂಠೀ ಗ್ರಾಮದ 9 ಮಂದಿ ರೈತರ ಜಮೀನನ್ನು ಕಳೆದ 2006ರಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಮೈಸೂರು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾ ವಲಯ ಕಚೇರಿ ಅಧಿಕಾರಿಗಳು, ಭೂಸ್ವಾಧೀನ ಮಾಡಿಕೊಂಡು ಭೂ ಪರಿಹಾರ ನೀಡಲು ಭರವಸೆ ನೀಡಿದ್ದರು. ಆದರೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದರು.




