ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 5 ವರ್ಷಕ್ಕೊಮ್ಮೆ ಜನಪ್ರತಿನಿಧಿಗಳನ್ನು ಆರಿಸುವ ಸುವರ್ಣ ಅವಕಾಶ ಮತದಾರರಿಗೆ ದೊರಕುತ್ತದೆ. ಅಂತಹ ಅವಕಾಶವನ್ನು ಮತದಾರರು ಸದ್ಬಳಕೆ ಮಾಡಿಕೊಂಡು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಆದರೆ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ, ಜನ ಬಲವನ್ನು ಹಣಬಲದಿಂದ ಕೊಂಡುಕೊಳ್ಳಲು ಅಭ್ಯರ್ಥಿಗಳು ಹೊರಟಿರುವುದು ವಿಷಾದನೀಯ.
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಹಣದ ಹೊಳೆಯೇ ಹರಿಯಿತು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಕುರುಡು ಕಾಂಚಾಣ ಈ ಬಾರಿ ಸಾಕಷ್ಟು ಜೋರಾಗಿಯೇ ಸದ್ದು ಮಾಡಿದೆ. ಪ್ರತಿ ಕ್ಷೇತ್ರದಲ್ಲೂ 25 ರಿಂದ 50 ಕೋಟಿವರೆಗೆ ಹಣವನ್ನು ಅಭ್ಯರ್ಥಿಗಳು ಖರ್ಚು ಮಾಡಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ನೀಡಿರುವ ಹಣದ ಪ್ರಮಾಣ ಬೇರೆಡೆಗಿಂತ ಹೆಚ್ಚು ಎಂಬ ವರದಿಗಳು ಬೆಚ್ಚಿ ಬೀಳಿಸುತ್ತಿವೆ. ಪ್ರಮುಖ ಮೂರು ಪಕ್ಷದ ಅಭ್ಯರ್ಥಿಗಳು 500, 1000, 1500, 2000 ಹೀಗೆ ಮನಸೋ ಇಚ್ಛೆ ಹಣವನ್ನು ಹಂಚಿದ್ದಾರೆ.
ಅಲ್ಲದೆ ಚುನಾವಣೆಯಲ್ಲಿ ಅಭ್ಯರ್ಥಿ ಆಗೇ ಆಗುತ್ತೇನೆ ಎಂದವರು, ಚುನಾವಣೆ ಘೋಷಣೆಯಾಗುವ ಮೊದಲೇ ಸ್ಟವ್, ಕುಕ್ಕರ್, ಹಾಟ್ ಬಾಕ್ಸ್, ಪಂಚೆ,ಸೀರೆ, ಮೂಗು ಬೊಟ್ಟು ಹಂಚಿದ್ದಾರೆ. ಚುನಾವಣೆ ಮತದಾನಕ್ಕೆ ಮೂರು ದಿನ ಇರುವಾಗ ಕೋಳಿ ಮಾಂಸ, ಸೀರೆ ಕೊಡಲಾಗಿದೆ. ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸಬೇಕಾದ ಚುನಾವಣೆ ಹಣ, ಆಮಿಷಗಳ ಚುನಾವಣೆಯಾಗಿ ಬದಲಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಎಂದು ಸಂವಿಧಾನ ಹೇಳುತ್ತದೆ.
ಆದರೆ ಇಲ್ಲಿ ಸಂವಿಧಾನವನ್ನು ಗಾಳಿಗೆ ತೂರಿ ಹಣಬಲದಿಂದ ಜನಮತವನ್ನು ಖರೀದಿ ಮಾಡಲಾಗುತ್ತಿದೆ. ಈ ರೀತಿ ಖರೀದಿ ಮಾಡಿ ಜನಪ್ರತಿನಿಧಿಗಳಾಗಲು ಹೊರಟವರು ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡುತ್ತಾರೆ. ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ. ಜನರೂ ಕೂಡ ಯಾವ ಮುಖ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಜನಪ್ರತಿನಿಧಿಗಳನ್ನು ಕೇಳುತ್ತಾರೆ. ಹಣಬಲದಿಂದ ಗೆದ್ದವನು ನಾಳೆ ಕ್ಷೇತ್ರದ ಜನರಿಗೆ ಹೇಗೆ ಉತ್ತರದಾಯಿ ಆಗುತ್ತಾನೆ ಎಂಬ ಪ್ರಶ್ನೆಯನ್ನು ಮತದಾರರು ಕೇಳಿಕೊಳ್ಳಬೇಕಿತ್ತು. ಆದರೆ ಅವರು ಕೂಡ ಅಭ್ಯರ್ಥಿಯ ಹಣಕ್ಕೆ ಮತ ಮಾರಿಕೊಂಡಿರುವುದು ಸರಿಯಾದದ್ದಲ್ಲ.
ಒಂದೊಂದು ಮತಕ್ಕೆ 5,000 ಕೊಟ್ಟಿದ್ದಾರೆ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಸ್ತುತ ಚುನಾವಣೆ ಬಗ್ಗೆ ಹೀಗೆನ್ನುತ್ತಾರೆ. ಸದ್ಯದ ರಾಜಕೀಯ ವ್ಯವಸ್ಥೆ ನೋಡಿದರೆ, ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದ ಪರಿಸ್ಥಿತಿ ಎದುರಾಗಿದೆ. ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು ವಿಷಾದನೀಯ. ಒಂದೊಂದು ಮತಕ್ಕೆ 5,000 ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಮತದಾರರು ಆಮಿಷಕ್ಕೆ ಒಳಗಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು ಎಂದಿದ್ದಾರೆ. ಆದರೆ ಅವರ ಪಕ್ಷದ ಅಭ್ಯರ್ಥಿಗಳು ಕೂಡ ಪ್ರತಿ ಮತಕ್ಕೆ ಇಂತಿಷ್ಟು ಹಣ ಕೊಟ್ಟೇ ಚುನಾವಣೆ ಎದುರಿಸಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಇಂದು ನಮಗೆ ಹಣ ಬೇಡ, ಅಭಿವೃದ್ಧಿ ಕೆಲಸ ಮಾಡಿ ಎನ್ನುವವರ ಸಂಖ್ಯೆ ಬಹಳ ವಿರಳವಾಗಿದೆ. ಹೇಗಿದ್ದರೂ ಗೆದ್ದವನು ಮುಂದೆ ಚೆನ್ನಾಗಿ ಹಣ ದೋಚುತ್ತಾನೆ. ಹಾಗಾಗಿ ಈಗ ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಮನಸ್ಥಿತಿಯ ಮತದಾರರೇ ಹೆಚ್ಚಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿದೆ. ಇಂದಿನ ರಾಜಕಾರಣಿಗಳೇ, ಮಹಾತ್ಮ ಗಾಂಧಿಯವರೇ ಇಂದು ಚುನಾವಣೆಗೆ ಸ್ಪರ್ಧಿಸಿದ್ದರೆ ಅವರು ಸೋಲುತ್ತಿದ್ದರು ಎಂದು ಹೇಳುತ್ತಾರೆ. ಅಭ್ಯರ್ಥಿಗಳು ಇಂದು ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣವನ್ನು ಬಂಡವಾಳವಾಗಿ ತೊಡಗಿಸಿ ಗೆದ್ದ ನಂತರ ಹಣ ಮಾಡುವ ದಂಧೆ ಮಾಡುತ್ತಾರೆ. ಜನರ ಸೇವೆಗೆಂದೇ ಇದ್ದ ರಾಜಕಾರಣ ಮಾಯವಾಗಿ ಅದೊಂದು ಹಣ,ಅಧಿಕಾರ ನಡೆಸುವ ದಂಧೆಯಾಗಿ ಬದಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜನರಿಂದ ಆಯ್ಕೆಯಾದ ಹಲವು ಜನಪ್ರತಿನಿಧಿಗಳು ತಮ್ಮನ್ನು ತಾವೇ ಮಾರಿಕೊಂಡು ಜನಾಭಿಪ್ರಾಯಕ್ಕೆ, ಸಂವಿಧಾನಕ್ಕೆ ದ್ರೋಹ ಬಗೆದಿರುವ ಘಟನೆಗಳು ಸಾಕಷ್ಟು ನಡೆದಿದೆ. ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಜನಪ್ರತಿನಿಧಿಯನ್ನು ಕೊಂಡು ಸರ್ಕಾರ ರಚಿಸುವ ನೀಚ ವ್ಯವಸ್ಥೆ ಇಂದು ಜಾರಿಯಲ್ಲಿದೆ. ಕೇವಲ ಹಣ ಅಧಿಕಾರಕ್ಕಾಗಿ ತಮ್ಮ ಸದಸ್ಯತ್ವವನ್ನು ಮಾರಿಕೊಳ್ಳುವ ಇಂತಹ ದುಷ್ಟರ ನಡುವೆಯೂ ಕೆಲವೊಂದಿಷ್ಟು ಸಭ್ಯರು ಕೂಡ ಏನೂ ಮಾಡದಂತಾಗಿದೆ. ಚುನಾವಣಾ ಆಯೋಗ ಹಲ್ಲು ಕಿತ್ತ ಹಾವಿನಂತಾಗಿದೆ. ಈ ಹಿಂದೆ ಟಿ.ಎನ್. ಶೇಷನ್ ಅವರಂತವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಚುನಾವಣಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯನ್ನು ತಂದಿದ್ದರು. ಅದಾದ ನಂತರ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ಯಾರೊಬ್ಬರು ಮುಂದಾಗಿಲ್ಲ ಇರುವುದು ಬೇಸರದ ಸಂಗತಿ.
ಇದುವರೆಗೆ ಚುನಾವಣಾ ಅಕ್ರಮ ಮಾಡಿರುವ ಯಾವೊಬ್ಬ ಜನಪ್ರತಿನಿಧಿಗೂ ಕಠಿಣ ಶಿಕ್ಷೆ ಆಗಿಲ್ಲದಿರುವುದು ಕೂಡ ಇಂತಹ ಅಕ್ರಮಗಳಿಗೆ ಉತ್ತೇಜನ ನೀಡಿದೆ. ಅಕ್ರಮಗಳನ್ನು ನಡೆಸಿ ಸಿಕ್ಕಿ ಹಾಕಿಕೊಂಡರೂ ನಂತರ ಕಾನೂನಿನ ಕುಣಿಕೆಯಿಂದ ಬಚಾವಾಗುವ ವಿದ್ಯೆ ಅವರಿಗೆ ರಾಜಕೀಯದ ಬಲವೇ ತಂದು ಕೊಟ್ಟಿದೆ. ಇಂದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ವಿಧಾನಸಭೆ, ಲೋಕಸಭೆಯವರೆಗೆ ಯಾವುದೇ ಚುನಾವಣೆಯಲ್ಲೂ ಹಣ ಹಂಚ ಬೇಕಾಗಿರುವುದು ದೇಶದ ದೌರ್ಭಾಗ್ಯವೇ ಸರಿ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬದಲಾಗಲೇಬೇಕಿದೆ. ಇಲ್ಲದಿದ್ದರೆ ಹಣ ಬಲದಿಂದ ಜನಪ್ರತಿನಿಧಿಯಾಗುವವರು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಕುತ್ತು ತಂದೇ ತರುತ್ತಾರೆ.




