ತಂದೆ ತಾಯಿಗಳು ಕೂಲಿ ಮಾಡಿ ತಮಗೆ ಎಷ್ಟೇ ಕಷ್ಟ ಇದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ
ಮಾಡಬೇಕು ಎಂದು ಕಷ್ಟಪಟ್ಟು ಓದಿಸುತ್ತಾರೆ, ಅದಕ್ಕಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ತಂದೆ ತಾಯಿಗಳಿಗೆ ಗೌರವ ತಂದು ಕೊಡುವ ಕೆಲಸ ಮಾಡಬೇಕು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ತಿಳಿಸಿದರು.
ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ದೇವಸ್ಥಾನ ವಿದ್ದಂತೆ ಅಲ್ಲಿ ವ್ಯಾಸಂಗ ಮಾಡುವ ಮಕ್ಕಳು ದೇವರ ಸಮಾನ. ವಿದ್ಯಾರ್ಥಿಗಳು ಉನ್ನತವಾಗಿ ಓದಿ ಮುಂದೆ ಬಂದಾಗ ತಂದೆ-ತಾಯಿಗಳು ಖುಷಿಪಡುತ್ತಾರೆ, ಅದಕ್ಕಾಗಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಿ ಎಂದು ಮನವಿ ಮಾಡಿದರು.

ಶಂಭು ಸೇವಾ ಟ್ರಸ್ಟ್ ವತಿಯಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರಗಳು ಸಮವಸ್ತ್ರ ಹಾಗೂ ಪುಸ್ತಕಗಳನ್ನು ಕೊಡುತ್ತಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಶಂಭು ಸೇವಾ ಟ್ರಸ್ಟ್ ವತಿಯಿಂದ ಒಂದೇ ರೀತಿಯ ಬ್ಯಾಗ್ ವಿತರಣೆ ಮಾಡಿದರೆ, ಮಕ್ಕಳನ್ನು ಸಮಾನವಾಗಿ ನೋಡಬಹುದು ಎಂದರು.
ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಸಹಕಾರ ನೀಡಿದರೆ, ನಮ್ಮ ದುಡಿಮೆಯ ಹಣ ಸಂಪಾದನೆಯಲ್ಲಿ ಶಂಭು ಸೇವಾ ಟ್ರಸ್ಟ್ ವತಿಯಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಊರುಗಳಿಗೆ ತೆರಳಿ ಕೃತಜ್ಞತೆ ಸಭೆ ಹಮ್ಮಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಪುಟ್ಟಮ್ಮ, ಕೆಂಪಚಾರಿ, ಸವಿತಾ, ಕವಿತಾ, ರವಿ, ಮುಖಂಡರಾದ ಸಿದ್ದರಾಜು ಭಾನುಪ್ರಕಾಶ್,ವೆಂಕಟೇಶ್ ಇತರರು ಹಾಜರಿದ್ದರು




