ಕಳೆದ ಆರು ತಿಂಗಳಿನಿಂದ ಸಂಬಳ ನೀಡದೆ ಏಕಾಏಕಿ ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ನಾಲ್ಕು ದಿನಗಳಿಂದ ಕೆಆರ್‌ಎಸ್‌ನಲ್ಲಿ ಪ್ರತಿಭಟಿಸುತ್ತಿದ್ದ ಬೃಂದಾವನ ಹೊರಗುತ್ತಿಗೆ ನೌಕರರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಅರೆಬೆತ್ತಲೆ ಧರಣಿ ನಡೆಸಿದರು.
ನಗರಕ್ಕೆ ಆಗಮಿಸಿದ 50ಕ್ಕೂ ಹೆಚ್ಚು ನೌಕರರು, ಕಾವೇರಿ ಉದ್ಯಾನದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಮುಂದೆ ಅರ್ಧ ಗಂಟೆ ಅರೆಬೆತ್ತಲೆ ಮೌನ ಧರಣಿ ನಡೆಸಿ, ತರುವಾಯ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ದಿನವಿಡೀ ಪ್ರತಿಭಟನಾ ಧರಣಿ ನಡೆಸಿದರು.
ಹಲವು ವರ್ಷಗಳಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ವಿಭಾಗದ ಕಾವೇರಿ ನೀರಾವರಿ ನಿಗಮದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಹೊರಗುತ್ತಿಗೆ ನೌಕರರನ್ನು ರಾಜಕೀಯ ದುರುದ್ದೇಶದಿಂದ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಿದರು.
ನ್ಯಾಯ ಒದಗಿಸುವ ಭರವಸೆ
ಧರಣಿ ನಿರತ ಹಂಗಾಮಿ ನೌಕರರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಳೆದ 6 ತಿಂಗಳಿನಿಂದ ಸಂಬಳ ನೀಡದ ಏಜೆನ್ಸಿ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ವಜಾಗೊಂಡ ನೌಕರರಿಗೆ ಸೇವೆ ಕಲ್ಪಿಸುವುದು ಹಾಗೂ ವೇತನ ಬಿಡುಗಡೆ ಬೇಡಿಕೆ ಈಡೇರದಿದ್ದರೆ ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಬೃಂದಾವನದ ಉದ್ಯಾನದಲ್ಲಿ ಹೊರಗುತ್ತಿಗೆಯಲ್ಲಿ ಸ್ವಚ್ಛತಾ ಮತ್ತು ನಿರ್ವಹಣಾ ವಿಭಾಗಗಳಲಿ ಕೆಲಸ ಮಾಡುತ್ತಿದ್ದ ಮಹದೇವ, ಕೃಷ್ಣ, ಎಂ.ಎಸ್. ರವಿ, ಎನ್.ರತೀಶ್, ವಿ. ಮೋಹನ, ಜಿ. ಅನಿಲ್ ಅವರನ್ನು ಕಳೆದ ಜು.9ರಂದು ಏಕಾಏಕಿ ಯಾವುದೇ ನೋಟಿಸ್ ಹಾಗೂ ಮಾಹಿತಿ ನೀಡದೆ ರಾಜಕೀಯ ದುರುದ್ದೇಶದಿಂದ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಮತ್ತು ಅವರ ಬಾಮೈದುನ ಮಂಜು ಅವರ ಮೌಖಿಕ ಆದೇಶದ ಮೇರೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಲಸದಿಂದ ತೆಗೆದು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.
ಕೆಆರ್’ಎಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 130ಕ್ಕೂ ಹೆಚ್ಚು ನೌಕರರಿಗೆ ಕಳೆದ 6 ತಿಂಗಳಿನಿಂದ ಸಂಬಳ ನೀಡದಿರುವ ಬಗ್ಗೆ ಕೆ.ಆರ್.ಎಸ್.ನ ಕಾ.ನೀ.ನಿಗಮದ ಮುಖ್ಯ ಕಚೇರಿ ಮುಂದೆ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಧರಣಿಯಲ್ಲಿ ಯುವ ಮುಖಂಡ ಕೆ.ಆರ್.ಮಂಜುನಾಥ್, ಮಹದೇವ, ಕೃಷ್ಣ, ಎಂ.ಎಸ್. ರವಿ, ಎನ್.ರತೀಶ್, ವಿ. ಮೋಹನ, ಜಿ. ಅನಿಲ್, ನಾರಾಯಣಸ್ವಾಮಿ, ಎಂ.ಎಸ್.ರಾಮ್, ಸುಂಕಮ್ಮ, ಪ್ರಮೀಳ, ವಿನೋದ, ಕೆ.ಎಸ್. ಮೀನಾಕ್ಷಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.




