ಮಾಜಿ ಸಚಿವ ಡಾ. ನಾರಾಯಣಗೌಡ ಅವರ 61ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕೆ.ಆರ್.ಪೇಟೆ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಜಿ.ಪಂ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಕೆ.ಎಸ್. ಪ್ರಭಾಕರ್ 2000ಕ್ಕೂ ಹೆಚ್ಚಿನ ರೈತ ಬಾಂಧವರಿಗೆ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಿದರು. ದಿನಪತ್ರಿಕೆ ವಿತರಿಸುವ ಹುಡುಗರಿಗೆ ಜರ್ಕಿನ್‌ಗಳನ್ನು ವಿತರಿಸಲಾಯಿತು.

ಮೇಲುಕೋಟೆಯ ಶ್ರೀ ರಾಮಾನುಜ ಗುರುಪೀಠದ ಶ್ರೀನಿವಾಸನ್ ಗುರೂಜಿ ಅವರು ಮಾಜಿ ಸಚಿವ ನಾರಾಯಣಗೌಡ ಅವರನ್ನು ಅಭಿನಂದಿಸಿ ಗೌರವಿಸಿ ಮಾತನಾಡಿ, ನಾರಾಯಣಗೌಡ ಅವರಂತಹ ನಿಸ್ವಾರ್ಥ ಸಮಾಜ ಸೇವಕರು ಇಂದಿನ ಸಮಾಜಕ್ಕೆ ಬೇಕಾಗಿದ್ದಾರೆ. ಒಬ್ಬ ಸಾಮಾನ್ಯ ರೈತನ ಮಗನಾಗಿ ಜನಿಸಿ, ಸಂಕಷ್ಟಗಳನ್ನು ಎದುರಿಸಿ ಮುಂಬೈ ಮಹಾನಗರಕ್ಕೆ ಹೋಗಿ ಬದುಕನ್ನು ಕಟ್ಟಿಕೊಂಡ ಗೌಡರು ಉದ್ಯಮಿಯಾಗಿ, ಸಮಾಜ ಸೇವಕರಾಗಿ ತಮ್ಮ ತಂದೆ ತಾಯಿಗಳಾದ ಪುಟ್ಟಮ್ಮ ಚಿಕ್ಕೆ ಗೌಡರ ಹೆಸರಿನಲ್ಲಿ ನಾಗರಿಕ ಟ್ರಸ್ಟ್ ಅನ್ನು ಸ್ಥಾಪಿಸಿ ನೂರಾರು ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಸಚಿವ ನಾರಾಯಣಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಮೋಹನ್, ನಾರಾಯಣಗೌಡರಿಗೆ ಬೆಳ್ಳಿ ಕಿರೀಟವನ್ನು ತೊಡಿಸಿ, ಬೆಳ್ಳಿಯ ಗದೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ಮೂಡಾ ಮಾಜಿ ಅಧ್ಯಕ್ಷ ಕೆ ಶ್ರೀನಿವಾಸ್, ಮಂಡ್ಯ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಕೆ ಜಿ ತಮ್ಮಣ್ಣ, ಮಂಡ್ಯ ನಗರಸಭೆ ಅಧ್ಯಕ್ಷ ಮಂಜು, ಪುರಸಭೆ ಅಧ್ಯಕ್ಷ ಮಹಾದೇವಿ ನಂಜುಂಡ, ಸದಸ್ಯರಾದ ಬಸ್ ಸಂತೋಷ್ ಕುಮಾರ್, ಎಚ್.ಆರ್.ಲೋಕೇಶ್, ಕೆಎಸ್ ಪ್ರಮೋದ್, ಶುಭ ಗಿರೀಶ್, ಶೋಭಾ ದಿನೇಶ್ ಮತ್ತಿತರರಿದ್ದರು.




