ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮುಸಲ್ಮಾನರಿಗೆ ಏನೂ ಮಾಡಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎರಡು ತಲೆಯ ಹಾವಿದ್ದಂತೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಟೀಕಿಸಿದರು.
ಪಾಂಡವಪುರ ಪಟ್ಟಣದ ಹರಳಹಳ್ಳಿ ಬಳಿ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷ ಮುಸಲ್ಮಾನರನ್ನು ಹತ್ತಿರ ಸೇರಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಬೆನ್ನ ಮೇಲೆ ಕೈಯಿಟ್ಟು ಅವರಿಗೆ ದ್ರೋಹ ಬಗೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ ಮುಸಲ್ಮಾನರ ಹಿತ ಕಾಯಲಿದ್ದು, ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಎಸ್. ಪುಟ್ಟರಾಜು ಅವರನ್ನು ಗೆಲ್ಲಿಸಬೇಕಿದೆ ಎಂದರು.
ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರ ಎರಡು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ.ಉತ್ತರ ಭಾರತದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಇಬ್ಬರು ಮುಸಲ್ಮಾನರನ್ನು ಸಜೀವವಾಗಿ ದಹನ ಮಾಡಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲು ಕಾಂಗ್ರೆಸ್ ಸಹಕಾರವೇ ಕಾರಣ. ಬಿಜೆಪಿಯ ಬಿ ಟೀಮ್ ಕಾಂಗ್ರೆಸ್ ಪಕ್ಷವೇ ಹೊರತು ಜೆಡಿಎಸ್ ಅಲ್ಲ ಎಂದು ತಿಳಿಸಿದರು.
ಹಿಜಾಬ್ ಬಗ್ಗೆ ಮೊದಲು ಧ್ವನಿಯೆತ್ತಿದ್ದು ಎಚ್.ಡಿ. ಕುಮಾರಸ್ವಾಮಿ. ಒಂದು ರಾಷ್ಟ್ರ ಒಂದು ಚುನಾವಣೆ ಎಂದಾಗ ಅದರ ವಿರುದ್ಧ ಮೊದಲು ಧ್ವನಿಯುತ್ತಿದ್ದೇ ಮಾಜಿ ಪ್ರಧಾನಿ ದೇವೇಗೌಡರು. ಎಚ್.ಡಿ. ಕುಮಾರಸ್ವಾಮಿ ಅವರು ಯಾವುದೇ ಒಂದು ಜಾತಿಯ ಪರ ಇಲ್ಲ. ಅವರು ಎಲ್ಲಾ ಧರ್ಮದ, ಜಾತಿಯ ಜನರ ಪರವಾಗಿದ್ದಾರೆ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ,ಅದನ್ನು ಹಾಳು ಬಿಡಲು ಬಿಜೆಪಿ ನಿಂತಿದೆ ಎಂದು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸಲ್ಮಾನ ಸಮುದಾಯದ ಸಿಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ಪಕ್ಷದ ಅಧ್ಯಕ್ಷರಾಗುವ ಹೊಣೆಗಾರಿಕೆ ನೀಡುವ ಮೂಲಕ ಜೆಡಿಎಸ್ ಮುಸಲ್ಮಾನರ ನಂಬಿಕೆಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಪಕ್ಷ ಮುಸಲ್ಮಾನ ಸಮುದಾಯಕ್ಕೆ ಎಲ್ಲಾ ರೀತಿಯ ಕಿರುಕುಳ ನೀಡಿದ್ದಾರೆ. ಬಿಜೆಪಿಯವರು ನಮಗೆ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಿ ಆಗಿದೆ. ಇನ್ನು ಭಯ,ಆತಂಕ ಎಲ್ಲಾ ಮಾಯವಾಗಿದೆ.ನಮ್ಮ ಸಮುದಾಯ ಜೆಡಿಎಸ್ ಪಕ್ಷದ ಪರ ನಿಂತು ಶಕ್ತಿ ತುಂಬಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಸಮುದಾಯಕ್ಕೆ ಏನನ್ನೂ ಮಾಡಿಲ್ಲ. ಮುಸಲ್ಮಾನ ಸಮುದಾಯದ ಮಹಿಳೆ ಮನಸ್ಸು ಮಾಡಿದರೆ ಪ್ರತಿ ಮನೆಯಿಂದ ಅವರು ಮೂರು ಮತಗಳನ್ನು ಜೆಡಿಎಸ್ ಪಕ್ಷ ಹಾಕಿಸಬಹುದು. ಮುಸಲ್ಮಾನರ ರಕ್ಷಣೆಗೆ ನಿಂತಿರುವ ಜೆಡಿಎಸ್ ಪಕ್ಷಕ್ಕೆ ಮತ ಹಾಕಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ತರಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ನಜ್ಮಾ ನಜೀರ್ ಮಾತನಾಡಿ, ಮುಸಲ್ಮಾನರಿಗೆ ಶೇ.4ರಷ್ಷು ಮೀಸಲಾತಿ ನೀಡಿದ ದೇವೇಗೌಡರ ಕಾರಣದಿಂದ ನಾನು ಎಂಬಿಬಿಎಸ್ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಕೀರ್ತಿ ದೇವೇಗೌಡರದ್ದು,ಹಾಗಾಗಿ ಇಂದು ಮುಸಲ್ಮಾನ ಸಮುದಾಯದವರು ಗ್ರಾಮ ಪಂಚಾಯಿತಿ ಸದಸ್ಯರು,ಅಧ್ಯಕ್ಷರಾಗಿದ್ದಾರೆ. ಮುಸಲ್ಮಾನ ಸಮುದಾಯಕ್ಕೆ ಈ ರೀತಿ ಮೀಸಲಾತಿ ನೀಡಿದ್ದು ದೇವೇಗೌಡರು, ಅವರ ಋಣ ತೀರಿಸುವ ಸಲುವಾಗಿ ನಾನು ಜೆಡಿಎಸ್ ಪಕ್ಷ ಸೇರಿದ್ದೇನೆ ಎಂದರು.
ಇಂದು ಬಿಜೆಪಿ ಪಕ್ಷ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಿದೆ.ಬಿಜೆಪಿ ಮುಸಲ್ಮಾನರಿಗೆ ಕಿರುಕುಳ ನೀಡಿದರೆ, ಕಾಂಗ್ರೆಸ್ ಮುಸ್ಲಿಮರ ಸಮುದಾಯದ ಯುವಕರನ್ನು ಜೈಕಾರ ಹಾಕಲು ಬಳಸಿಕೊಂಡಿದೆ. ಬಿಜೆಪಿಗೆ ನಾವು ಬೇಡವಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ಬಿಜೆಪಿಯ ಬಿಬಟೀಮ್ ಎಂದು ಹೇಳುತ್ತದೆ.ಆದರೆ ಕಾಂಗ್ರೆಸ್ ಎಂದೂ ಮುಸಲ್ಮಾನರ ಪರ ಧ್ವನಿ ಎತ್ತಿಲ್ಲ.ಹಿಜಾಬ್,ಜಾತ್ರೆ, ಸಂತೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಕ್ಕೆ ನಿಷೇಧ ಮಾಡಲು ಬಿಜೆಪಿ ಮುಂದಾದಾಗ ಕುಮಾರಸ್ವಾಮಿಯವರು ನಮ್ಮ ಸಮುದಾಯದ ಬೆಂಬಲಕ್ಕೆ ನಿಂತಿದ್ದಾರೆ. ನಾಳೆ ನಮ್ಮ ಸಮುದಾಯದ ಜನಗಳು ನೆಮ್ಮದಿಯಿಂದ ಬದುಕಬೇಕಾದರೆ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಶ್, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಮುಕ್ರಂಪಾಶ ಎಲೆಕೆರೆ ಸಮಿವುಲ್ಲಾ, ಮುಮ್ತಾಜ್ ಪಾಷಾ ಇಮ್ರಾನ್ ಶರೀಫ್ ಮತ್ತಿತರರಿದ್ದರು.




