ಮೈಷುಗರ್ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ವದಂತಿಗಳು ಕೇಳಿ ಬಂದ ಹಿನ್ನಲೆಯಲ್ಲಿ ಶನಿವಾರ ಮೈಷುಗರ್ ಕಾರ್ಖಾನೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಕಾರ್ಖಾನೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾರಂಭದಲ್ಲಿ 1000 ದಿಂದ 1500 ಟನ್ ಕಬ್ಬು ಅರೆಯಲಾಗುತ್ತಿತ್ತು, ಇದು ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೆ 30,000 ಟನ್ ಕಬ್ಬು ಅರೆಯಲಾಗಿದೆ.ರೈತರಿಗೆ ಇತರೆ ಕಾರ್ಖಾನೆ ನೀಡುವಂತೆ ಸಕಾಲದಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿಸಲಾಗುತ್ತಿದೆ ಎಂದರು.

ಸಾರ್ವಜನಿಕರು ಹಾಗೂ ರೈತರ ಆಸೆಯಂತೆ ಕಾರ್ಖಾನೆಯನ್ನು ಸರ್ಕಾರ ಅಭಿವೃದ್ಧಿ ಪಡಿಸುತ್ತಿದೆ. ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಇಲ್ಲಿ ಸಣ್ಣ ಪುಟ್ಟ ತೊಂದರೆಯಿದ್ದು, ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಾಹಿಸುವಂತೆ ಮಾಡಲಾಗುವುದು ಎಂದರು.
ರೈತರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು. ವದಂತಿಗಳನ್ನು ಹರಡುವ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಎರಡು ಉತ್ತಮ ಗುಟ್ಟದ ಎಸ್ 30 ಹಾಗೂ ಎಮ್ 30 ಸಕ್ಕರೆಯನ್ನು ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದೆ ಹಾಗೂ ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸಹ ಇದೆ ಎಂದರು.
ಹೊಸ ಕಬ್ಬು ಅರೆಯುವಿಕೆಯಿಂದ 12,000 ಕ್ವಿಂಟಲ್ ಸಕ್ಕರೆ ಬಂದಿದೆ ಅದನ್ನು ಒಳ್ಳೆಯ ರಿಯಾಯಿತಿ ದರದಲ್ಲಿ ರಫ್ತು ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕರುಗಳಾದ ರವಿಕುಮಾರ್ ಗಣಿಗ, ರಮೇಶ್ ಬಾಬು ಬಂಡಿಸಿದ್ದೇಗೌಡ, ರೈತ ಹೋರಾಟಗಾರ್ತಿ ಸುನಂದ ಜಯರಾಂ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್ ಹಾಗೂ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು.




