ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ‘ಕೋವಿಶೀಲ್ಡ್ ಲಸಿಕೆ’ ಬಿಡುಗಡೆ ಮಾಡಿದ್ದ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಅವರು ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ 52 ಕೋಟಿ ರೂಪಾಯಿ ದೇಣಿಗೆ ನೀಡಿರುವುದಾಗಿ ವರದಿಯಾಗಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, 2022ರ ಆಗಸ್ಟ್ ಒಂದೇ ತಿಂಗಳಲ್ಲಿ ಭಾರೀ ಮೊತ್ತದ ದೇಣಿಗೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ನೀಡಿದೆ. 48 ಗಂಟೆಗಳಲ್ಲಿ 50 ಕೋಟಿ ದೇಣಿಗೆ ನೀಡಿದ್ದರೆ, ಉಳಿದ ಎರಡು ಕೋಟಿ ಮೊತ್ತವನ್ನು ಮುಂದಿನ 15 ದಿನಗಳ ಅವಧಿಯಲ್ಲಿ ನೀಡಿದ್ದಾರೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಕಮಿಷನ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ನಂತರ ಈ ಮಾಹಿತಿಯನ್ನು ರಾಯಿಟರ್ಸ್ ಬಹಿರಂಗಪಡಿಸಿದೆ.
“ಆಗಸ್ಟ್ 2022ರಲ್ಲಿ, ಔಷಧೀಯ ಕಂಪನಿಯಾದ ಸೀರಮ್ ಮೂರು ಕಂತುಗಳಲ್ಲಿ ಒಟ್ಟು ರೂ. 52.5 ಕೋಟಿಯನ್ನು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ಗೆ ವರ್ಗಾಯಿಸಿತ್ತು. ಆಗಸ್ಟ್ 1 ರಂದು ರೂ. 40 ಕೋಟಿ, ಆಗಸ್ಟ್ 2ರಂದು ರೂ. 10 ಕೋಟಿ ಮತ್ತು ಆಗಸ್ಟ್ 17 ರಂದು ರೂ. 2.5 ಕೋಟಿಯಷ್ಟು ಮೊತ್ತವನ್ನು ಪುಡೆಂಟ್ ಟ್ರಸ್ಟ್ ಮುಖಾಂತರ ಬಿಜೆಪಿಗೆ ದೇಣಿಗೆ ರೂಪದಲ್ಲಿ ವರ್ಗಾಯಿಸಿತ್ತು” ಎಂದು ತಿಳಿಸಿದೆ.
ಕೋವಿಡ್ ಸಂದರ್ಭದಲ್ಲಿ ಲಸಿಕೆ ತಯಾರಿಸಲು ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರವು ಏಕಸ್ವಾಮ್ಯ ಹಕ್ಕು ನೀಡಿತ್ತು. ಯಾವುದೇ ಇತರ ಕಂಪನಿ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಲಸಿಕೆಗಳನ್ನು ತಯಾರಿಸಲು ಅನುಮತಿಸಿರಲಿಲ್ಲ. ಇದಕ್ಕೆ ಪ್ರತಿಯಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಬಿಜೆಪಿಗೆ ರೂ.52 ಕೋಟಿ ದೇಣಿಗೆ ನೀಡಿದೆ ಎಂದು ಹೇಳಲಾಗ್ತಿದೆ.
2011ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಅದಾರ್ ಪೂನಾವಾಲ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ್ದ ಸೀರಮ್ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಿದರು. ಇದನ್ನು ಕೇಂದ್ರ ಸರ್ಕಾರವು ಲಕ್ಷಾಂತರ ಜನರಿಗೆ ವಿತರಿಸಿತ್ತು.




