ಉಡುಪಿ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಮಹಿಳೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರನ್ನು ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಬಳಿಕ ಠಾಣಾ ಜಾಮೀನು(ಸ್ಟೇಷನ್ ಜಾಮೀನು) ನೀಡಿ ಬಿಡುಗಡೆಗೊಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳು ಹೈಗ್ರೌಂಡ್ಸ್ ಪೊಲೀಸ್ ಠಾಣಾಧಿಕಾರಿಯವರನ್ನು ಸಂಪರ್ಕಿಸಿದಾಗ, ‘ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಕುಟುಂಬದ ಬಗ್ಗೆ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನು ನೀಡಿ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಸಿಎಂ ಕುಟುಂಬದ ಮಹಿಳೆಯರ ಬಗ್ಗೆ ವೈಯಕ್ತಿಕವಾಗಿ ಆ ರೀತಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು. ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ’ ಎಂದು ತಪ್ಪೊಪ್ಪಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ..@siddaramaiah ನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ
ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ? pic.twitter.com/jP0QTKvL5R— ಶಕುಂತಲ🪷Shakunthala (@ShakunthalaHS) July 25, 2023
“>
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣದ ಬಗ್ಗೆ ಟ್ವೀಟ್ ಮಾಡಿದ್ದ ಶಕುಂತಲಾ, ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ವಿಡಿಯೋವನ್ನು ಇದೇ ರೀತಿ ಮಾಡಿದ್ದಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ? ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹನುಮಂತರಾಯ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಜು.27ರಂದು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಶಕುಂತಲಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
‘ಸ್ಟೇಷನ್ ಜಾಮೀನು’ ಅಂದರೆ ಏನು?
ಯಾವುದಾದರೊಂದು ಘಟನೆಗೆ ಸಂಬಂಧಿಸಿ ವ್ಯಕ್ತಿಯ ಮೇಲೆ ದೂರು ದಾಖಲಾದಾಗ, ದೂರು ದಾಖಲಾದ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಾರೆ. ವಿಚಾರಣೆ ನಡೆಸಿದ ಬಳಿಕ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರಕರಣ ತೀವ್ರ ಸ್ವರೂಪದ್ದಲ್ಲದಿದ್ದರೆ ಅಥವಾ ನ್ಯಾಯಾಲಯಕ್ಕೆ ಕಳುಹಿಸಬೇಕೆಂದು ಅನಿಸದಿದ್ದರೆ, ಮುಚ್ಚಳಿಕೆ ಬರೆಸಿಕೊಂಡು ಪೊಲೀಸರೇ ನೀಡುವ ಜಾಮೀನು ‘ಸ್ಟೇಷನ್ ಜಾಮೀನು’ ಆಗಿದೆ.
ಕೃಪೆ : ಈ ದಿನ.ಕಾಂ




