ಮಂಡ್ಯ ಜಿಲ್ಲೆಯಲ್ಲಿ ಸುಮಾರು 10,000 ಕ್ಕಿಂತ ಹೆಚ್ಚು ಆರ್.ಟಿ.ಸಿ ಗಳು ಮೃತ ಖಾತೆದಾರರ ಹೆಸರಿನಲ್ಲಿಯೇ ಮುಂದುವರೆದಿದ್ದು, ಸದರಿಯವರ ವಾರಸುದಾರರುಗಳಿಗೆ ನಿಯಮಾನುಸಾರ ಪೌತಿ ಖಾತೆ ಮಾಡಿರುವುದಿಲ್ಲ ಎಂಬ ಬಗ್ಗೆ ಜನಪ್ರತಿನಿಧಿಗಳಿಂದ ಸಾರ್ವಜನಿಕರಿಂದ ರೈತರಿಂದ ಹಾಗೂ ಮೃತರ ಕುಟುಂಬದ ವಾರಸುದಾರರಿಂದ ಹಲವಾರು ಅರ್ಜಿಗಳು ಹಾಗೂ ದೂರುಗಳು ಪ್ರಸ್ತಾಪವಾಗುತ್ತಿರುವುದು ಕಂಡು ಬಂದಿರುವುದರಿಂದ ಜಿಲ್ಲಾದ್ಯಂತ ಪೌತಿ ಖಾತೆ ಆಂದೋಲನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯಿಂದ ತುರ್ತು ಕ್ರಮವಹಿಸಿ ಎಲ್ಲಾ ಪೌತಿ ಖಾತೆದಾರರ ಕಾನೂನುಬದ್ದ ವಾರಸುದಾರರಿಗೆ ಪೌತಿ ಖಾತೆ ಮಾಡುವ ಅಗತ್ಯತೆ ಹಾಗೂ ಅನಿವಾರ್ಯತೆ ಇರುತ್ತದೆ. ಕೆಲವೊಂದು ಮೃತ ರೈತ ಕುಟುಂಬದ ವಾರಸುದಾರರು ಅನಕ್ಷರಸ್ಥರಾಗಿದ್ದು, ಸದರಿಯವರಿಗೆ ಪೌತಿ ಖಾತೆಗಗೆ ಅರ್ಜಿ ಸಲ್ಲಿಸುವ ಬಗ್ಗೆ ಅರಿವು ಇಲ್ಲದೆ ಇರುವುದನ್ನು ಸಹ ಜಿಲ್ಲಾಡಳಿತ ಗಮನಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೌತಿ ಖಾತೆಯ ಅಗತ್ಯತೆ
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ ವಾರಸು ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿಮೃದ್ದಿ ಪಡಿಸಲು ಸಾಲ ಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ಪರಿಹಾರದ ಮೊಬಲಗನ್ನು ಪಡೆಯುವುದು ದುಸ್ತರವಾಗುತ್ತದೆ. ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಕಾಯಿದೆಯಂತೆ ವಶಪಡಿಸಿಕೊಂಡಾಗಲೂ ಸಹ ಪರಿಹಾರದ ಹಣವನ್ನು ಪಡೆಯಲು ವಿವಿಧ ಕಛೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುತ್ತದೆ.
ಪಿಎಂಕಿಸಾನ್ ಯೋಜನೆಯಡಿ ಶೇ.83 ರಷ್ಟು ರೈತರು ಮಾತ್ರ ಈ ಯೋಜನೆಯಡಿ ಫಲಾನುಭವಿಯಾಗಿದ್ದು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಆಂದೋಲನ ಮಾಡುವ ಸಂದರ್ಭದಲ್ಲಿ ಸಂಗ್ರಹಿಸಿ ನೀಡಿದ ಮಾಹಿತಿಯಂತೆ ಶೇ.10 ರಿಂದ 15 ರಷ್ಟು ಖಾತೆದಾರರು ಪೌತಿಯಾಗಿದ್ದು ಸದರಿಯವರ ವಾರಸುದಾರರ ಜಮೀನಿನ ಅನುಭವದಲ್ಲಿದ್ದು, ಪೌತಿ ಖಾತೆಯಾಗದ ಕಾರಣ ಸದರಿ ಯೋಜನೆಯಡಿ ನೋಂದಣಿ ಮಾಡಲು ಸಾಧ್ಯವಾಗಿಲ್ಲದಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ ಇನ್ನೂ ಕೂಡ ಶೇ.17 ರಷ್ಟು ರೈತರು ಪಿಎಂಕಿಸಾನ್ ಯೋಜನೆಯಡಿ ಫಲಾನುಭವಿಯಾಗದೆ ಇರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮಸಹಾಯಕ/ಗ್ರಾಮ ಆಡಳಿತ ಅಧಿಕಾರಿ/ರಾಜಸ್ವನಿರೀಕ್ಷಕ/ಉಪತಹಶೀ
ಪೌತಿ ಖಾತೆ ಆಂದೋಲನ
ಮೃತ ಖಾತೆದಾರರ ಕಾನೂನುಬದ್ದ ವಾರಸುದಾರರಿಗೆ ಶೇ.100ರಷ್ಟು ಪೌತಿ ಖಾತೆ ಮಾಡುವ ಉದ್ದೇಶವನ್ನು ಹೊಂದಿದ್ದು, ಜಿಲ್ಲೆಯಲ್ಲಿ ಏಕಕಾಲಕ್ಕೆ ಪೌತಿ ಖಾತೆ ಮಾಡುವ ಸಂಬಂಧ 2023ರ ಆಗಸ್ಟ್ ನಿಂದ ಪೌತಿ ಖಾತಾ ಆಂದೋಲನ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದ್ದಾರೆ.

ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ತಹಶಿಲ್ದಾರ್ರವರು ಗ್ರಾಮಾವಾರು ಪೌತಿ ಖಾತೆದಾರರನ್ನು ಪತ್ತೆಹಚ್ಚಿ ಅರ್ಹ ಪ್ರಕರಣಗಳನ್ನು ಪಟ್ಟಿ ಮಾಡಬೇಕು. ಗ್ರಾಮ ಆಡಳಿತ ಅಧಿಕಾರಿಯವರು ಈಗಾಗಲೇ ಬೆಳೆ ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿ ನಮೂದು ಮಾಡುವ ಸಂದರ್ಭದಲ್ಲಿ ಕಂಡು ಬಂದಂತಹ ಪೌತಿ ಖಾತೆದಾರರ ಮಾಹಿತಿಯನ್ನು ಭೂಮಿ ತಂತ್ರಾಂಶದಿಂದ ಪಡೆದು ಪಟ್ಟಿಗೆ ಸೇರಿಸಿಕೊಳ್ಳಬೇಕು. ವಾರದಲ್ಲಿ ಒಂದು ದಿನವನ್ನು ಪ್ರತ್ಯೇಕವಾಗಿ ಪೌತಿಖಾತೆ ಆಂದೋಲನಕ್ಕೆ ನಿಗದಿ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಅರ್ಹ ಪ್ರಕರಣಗಳನ್ನು ಪತ್ತೆ ಹಚ್ಚಿದ ನಂತರ ನಿಗದಿಪಡಿಸಿದ ದಿನಾಂಕದಂದು ಕನಿಷ್ಟ 3 ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತಾ ಆಂದೋಲನಾ ಹಮ್ಮಿಕೊಳ್ಳುವುದು. ಪೌತಿ ಖಾತಾ ಆಂದೋಲನ ಕುರಿತು ಸಂಬಂಧಪಟ್ಟ ಗ್ರಾಮಸ್ಥರಿಗೆ ಗ್ರಾಮ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸುವಂತೆ ಸೂಚಿಸಿದ್ದಾರೆ.
ಪೌತಿಖಾತಾ ವಾರಸುದಾರರಿಂದ ನಮೂನೆ-19 ರಲ್ಲಿ ಅರ್ಜಿ ಸ್ವೀಕರಿಸಿ ನಾಡಕಚೇರಿಯ ಭೂಮಿ ತಂತ್ರಾಂಶದಲ್ಲಿ ಅರ್ಜಿಯನ್ನು ದಾಖಲಿಸಿ 16 ರಿಂದ 20 ದಿನಗಳಲ್ಲಿ ಖಾತೆ ಬದಲಾವಣೆಗೆ ಕ್ರಮವಹಿಸಿ ಶೇ.100 ರಷ್ಟು ಪೌತಿಖಾತೆ ಬದಲಾವಣೆಯಲ್ಲಿ ಪ್ರಗತಿ ಸಾಧಿಸಿ ಸಂಬಂಧಪಟ್ಟ ಪೌತಿ ಖಾತಾ ವಾರಸುದಾರರಿಗೆ ಆರ್.ಟಿ.ಸಿ ಮತ್ತು ಮ್ಯುಟೇಷನ್ಗಳನ್ನು ನೀಡುವುದು. ಉಪವಿಭಾಗಾಧಿಕಾರಿಗಳು ಪೌತಿಖಾತೆ ಆಂದೋಲನವನ್ನು ಮೇಲುಸ್ತುವಾರಿವಹಿಸಿ ಅನುಷ್ಟಾನಗೊಳಿಸುವಂತೆ ಅವರು ಸೂಚಿಸಿದ್ದಾರೆ.
ಪ್ರತಿ ತಿಂಗಳು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆ ಆಂದೋಲನ ಮೂಲಕ ಇತ್ಯರ್ಥ ಪಡಿಸಿದ ಪ್ರಕರಣಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.




