ತಮಿಳುನಾಡಿಗೆ ಕೆಆರ್ಎಸ್ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮಂಡ್ಯ ನಗರದ ಜೆಸಿ ವೃತ್ತದಲ್ಲಿ ರೈತಸಂಘದ ಪದಾಧಿಕಾರಿಗಳು ಧಿಡೀರ್ ಪ್ರತಿಭಟನೆ ನಡೆಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ರೈತರ ನಾಲೆಗೆ ನೀರು ಬಿಡದೇ ತಮಿಳುನಾಡಿಗೆ ಕೆ.ಆರ್.ಎಸ್. ಡ್ಯಾಂನಿಂದ ನೀರು ಬಿಡಲಾಗಿದೆ, 5,358 ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿಗೆ ಬಿಡಬೇಕಾದ ನಿಗಧಿತ ಪ್ರಮಾಣ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಸಮಜಾಯಿಸಿ ನೀಡದರೂ ಕೇಳದ ರೈತರು ನಾಲೆಗೆ ನೀರು ಹರಿಸಿ ಎಂದು ಒತ್ತಾಯಿಸಿದರು.

ರೈತರ ಬೆಳೆಗಳಿಗೆ ನೀರು ಬಿಡುಗಡೆಯ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜನಪ್ರತಿನಿಧಿಗಳು ತಿಳಿಸಿದ್ದಾರೆ. ಹೀಗಿರುವಾಗ ಕಾವೇರಿ ನೀರಾವರಿ ನಿಗಮ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂದು ಕಿಡಿಕಾರಿದರು.
ಕೊಡಗಿನಲ್ಲಿ ಭಾರೀ ಮಳೆಯಾದ ಕಾರಣ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟವೂ ಹೆಚ್ಚಿದೆ. ಈಗಾಗಲೇ ಕೆ.ಆರ್.ಎಸ್ನಲ್ಲಿ 113 ಅಡಿ ನೀರು ತುಂಬಿದೆ. ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿ ಬಾಕಿ ಇರುವಾಗಲೇ ತಮಿಳುನಾಡಿನ ಹಿತ ಕಾಯಲು ಸ್ಥಳೀಯ ರೈತರ ಬೆಳೆಯನ್ನು ಒಣಗಿಸುವಂತೆ ಮಾಡಿರುವುದು ಖಂಡನೀಯ ಎಂದರು.
ಈಗ ಮತ್ತೆ ಮಳೆ ಪ್ರಮಾಣ ತಗ್ಗಿದೆ. ಅದಕ್ಕೆ ಕರುನಾಡಿನ ರೈತರಿಗೆ ಆತಂಕ ಹೆಚ್ಚಾಗುತ್ತಿದೆ. ಮತ್ತೆ ಮಳೆಯಾದ್ರೆ ಯಾವ ತೊಂದ್ರೆಯೂ ಇರಲ್ಲ. ಕೆ.ಆರ್.ಎಸ್. ಡ್ಯಾಂನ ಇಂದಿನ ನೀರಿನ ಮಟ್ಟ ಪೂರ್ಣವಾಗಿಲ್ಲ, ಅಣೆಕಟ್ಟೆಯ ಗರಿಷ್ಠ ಮಟ್ಟ- 124.80 ಅಡಿ. ಇಂದಿನ ಮಟ್ಟ- 113.44 ಅಡಿ. ಒಳ ಹರಿವು- 5,270 ಕ್ಯೂಸೆಕ್ ಇದೆ, ಹೊರ ಹರಿವು- 5,358 ಕ್ಯೂಸೆಕ್ ಇದೆ, ಇದರಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದು ಸ್ಪಷ್ಟವಾಗಿದೆ ಎಂದು ಖಂಡಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ತಮಿಳುನಾಡಿಗೆ ನೀರು ಬಿಟ್ಟಿರುವುದು ರೈತರಿಗೆ ಅನ್ಯಾಯ ಮಾಡಿದಂತೆ, ರೈತರ ಬೆಳೆಗೆ ನೀರಿಲ್ಲದೇ ಇರುವಾಗ ನೀರು ಬಿಟ್ಟು, ಸರ್ಕಾರ ಅವನತಿಯೆಡೆ ಸಾಗಿದೆ. ಈ ಹಿಂದೆಯೂ ಸಹ ಬಿಜೆಪಿ ಇದನ್ನೇ ಮಾಡಿದ್ದು, ಈಗ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ನಡೆಯಬೇಕು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಲತಾ ಶಂಕರ್ ಮಾತನಾಡಿ, ಸರ್ಕಾರ ಈಗ ತಮಿಳುನಾಡಿಗೆ ನೀರು ಹರಿಸುವ ಮೂಲಕ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ, ತಕ್ಷಣ ನೀರು ನಿಲ್ಲಿಸದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬೊಮ್ಮೇಗೌಡ, ಜವರೇಗೌಡ, ನಾಗರಾಜು, ಗೋಪಾಲಪುರಸುರೇಶ್, ಪುಟ್ಟಸ್ವಾಮಿ, ತಮ್ಮೇಗೌಡ ಮತ್ತಿತರರಿದ್ದರು.




