ಜೀವನ ಅನ್ನೋದು ದೇವರು ಕೊಟ್ಟ ವರ, ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗಾಗಿ ವಿದ್ಯಾರ್ಥಿಗಳು ದುಶ್ಚಟದಿಂದ ದೂರ ಉಳಿಯಬೇಕೆಂದು ಜನಜಾಗೃತಿ ವೇದಿಕೆ ಸದಸ್ಯೆ ನಳಿನಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶ್ರೀರಂಗಪಟ್ಟಣದ ಗಂಜಾಂನ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀನಿವಾಸ್ ಅಗ್ರಹಾರ ವಲಯದ ವತಿಯಿಂದ ಆಯೋಜಿಸಿದ್ದ “ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ”ಉದ್ಘಾಟಿಸಿ ಮಾತನಾಡಿದರು.
ಯುವಕರು ದುಶ್ಚಟದಿಂದ ದೂರವಿದ್ದು ಒಳ್ಳೆಯ ಆರೋಗ್ಯ ಮತ್ತು ಜೀವನ ಆಯ್ಕೆ ಮಾಡಿ ಕೊಳ್ಳಬೇಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕ್ಷೇತ್ರ ಮಟ್ಟದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಿರಂತರ ಮಾಡುತ್ತಿದ್ದಾರೆ ಅವರ ಕಾರ್ಯ ಶ್ಲ್ಯಾಗನೀಯ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ಮಾದಕ ವಸ್ತುಗಳ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವ ಜನಾಂಗ ಅಡ್ಡದಾರಿ ಹಿಡಿಯುತ್ತಿವೆ, ಇಂತಹ ಯಾವುದೇ ಚಟಗಳಿಗೆ ಬಲಿಯಾಗದೆ ಸದೃಢ ದೇಶ ಕಟ್ಟಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು, ಅಲ್ಲದೇ ತಂಬಾಕು ಉತ್ಪನ್ನಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕಿ ಅರುಣ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಗಣಪತಿ ಭಟ್, ಶಿಕ್ಷಕರಾದ ಕುಮದ್ವತಿ ಹಾಗೂ ಶಾಲಾ ಮಕ್ಕಳು,ಶಿಕ್ಷಕರು, ಸ್ಥಳೀಯ ಸೇವಾ ಪ್ರತಿನಿಧಿ ಸರಸ್ವತಿ, ಪ್ರಿಯಾಂಕ ಹಾಜರಿದ್ದರು.




