ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುವುದಕ್ಕಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ನ.ಲಿ.ಕೃಷ್ಣ ಅವರ ನೇತೃತ್ವದಲ್ಲಿ ಉಪ ಸಮಿತಿಯನ್ನು ರಚಿಸಿ ಮದ್ದೂರು ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಮದ್ದೂರು ತಾಲ್ಲೂಕು ಆಡಳಿತವು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನ ಮದ್ದೂರು ಕ್ರೀಡಾಂಗಣದಲ್ಲಿ ಹಮ್ಮಿಕ್ಕೊಂಡಿದ್ದು, ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹೆಸರನ್ನ ಸೂಚಿಸಲು ಸಾರ್ವಜನಿಕರಿಂದ ಕೋರಲಾಗಿದೆ.
ಸಾಧಕರು ಒಂದು ಪಾಸ್ ಪೊರ್ಟ್ ಸೈಜ್ ಪೊಟೊ, ಜೊತೆಗೆ ಸಾಧನೆಯ ವಿವರವುಳ್ಳ ಪತ್ರದ ಪ್ರತಿ ಹಾಗೂ ಸಾಧನೆಯ ಮಾಹಿತಿಯ ವಿವರವನ್ನು ಉಪ ಸಮಿತಿಯ ಕಾರ್ಯದರ್ಶಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆ.11ರ ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ.
ಕೃಷಿ, ಸೇನೆ( ಹಾಲಿ / ನಿವೃತ್ತ), ಶೈಕ್ಷಣಿಕ ( ವಿಧ್ಯಾರ್ಥಿ), ಜಾನಪದ, ಸಮಾಜಪರತೆ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಿಂದ ಕ್ಷೇತ್ರವಾರು ಒಬ್ಬರಂತೆ ಒಟ್ಟು ಐದು ಜನರಿಗೆ ಸನ್ಮಾನಿಸಲಾಗುವುದು.
ಉಪ ಸಮಿತಿಯ ಸದಸ್ಯ ಕಾರ್ಯದರ್ಶಿಯನ್ನಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ, ಸದಸ್ಯರನ್ನಾಗಿ ರೋಟರಿ ಅಧ್ಯಕ್ಷ ಎಂ.ಸಿ. ಶಶಿಗೌಡ, ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಸದಸ್ಯ ಎಸ್. ವೆಂಕಟಚಲುವಯ್ಯ ಹಾಗೂ ಮದ್ದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎಸ್. ಪುಟ್ಟಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.




