ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ತಾಲ್ಲೂಕಿನ ಕಸಬಾ ಹೋಬಳಿ ಪಾಲಗ್ರಹಾರ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಕ್ಷದ ಬೆಂಬಲಿತರ ಪಾಲಾಗುವ ಮೂಲಕ ಮತ್ತೇ ಸಚಿವ ಚಲುವರಾಯಸ್ವಾಮಿ ಅವರು ಮೇಲುಗೈ ಸಾಧಿಸಿದ್ದಾರೆ.
9 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಪಕ್ಷದ 5 ಮತ್ತು ಜೆಡಿಎಸ್ ಪಕ್ಷದ 4 ಬೆಂಬಲಿತ ಸದಸ್ಯರಿದ್ದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಫೋಟಿ ಇತ್ತು ಇದರ ಲಾಭ ಪಡೆಯಲು ಜೆಡಿಎಸ್ ಹವಣಿಸಿತ್ತು. ಆದರೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಪಂಚಾಯಿತಿಯ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸಾಧ್ಯವಾಗಿದೆ.
ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಗ್ರಾಮದ ರಾಧ ನಾಗರಾಜು, ಉಪಾಧ್ಯಕ್ಷರಾಗಿ ಹಾಲತಿ ಗ್ರಾಮದ ಪುಷ್ಪಾಂಜಲಿ ಗಿರೀಶ್ 5 ಮತಗಳನ್ನು ಪಡೆದು ಜಯಶೀಲರಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಪಿ.ಕೆ.ವಿನಯ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾಗ್ಯಮ್ಮ ತಲಾ 4 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಗಳಾಗಿ ಲೋಕೋಪಯೋಗಿ ಇಲಾಖೆಯ ಎಇಇ ನಂದಕುಮಾರ್, ಪಿಡಿಒ ಶ್ರೀಕಂಠು ಕಾರ್ಯನಿರ್ವಹಿಸಿದರು.
ಮುಖಂಡರಾದ ಬಿ.ಎನ್.ವನರಾಜು, ತಿಮ್ಮಯ್ಯ, ದೇವರಾಜು, ಎಚ್.ಎನ್.ಗಿರೀಶ್, ಪಿ.ಆರ್.ರಮೇಶ್, ಬಿ.ಎನ್.ರಾಜೇಶ್, ಶ್ರೀನಿವಾಸ್ , ಮೂರ್ತಿ ಸೇರಿದಂತೆ ಹಲವರು ಚುನಾವಣೆ ಸಾರಥ್ಯ ವಹಿಸಿದ್ದರು.




