ನಾಗಮಂಗಲ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೌಢಶಾಲಾ ಮತ್ತು ಕಾಲೇಜಿನ ಅಮೃತ ಮತ್ತು ಸುವರ್ಣ ಮಹೋತ್ಸವದ ಉದ್ಘಾಟನೆ ನೆರವೇರಿಸಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಕಾಲೇಜು ಅಭಿವೃದ್ಧಿಗೆ ₹40 ಲಕ್ಷ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.
ಕಾಲೇಜಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಾದ ಸಭಾಂಗಣದ ಮಾದರಿಯ ವಿಶಾಲವಾದ ಚಾವಣಿ ಮತ್ತು ನೆಲಹಾಸು ನಿರ್ಮಿಸಲು ಅಗತ್ಯವಾಗಿ ಕ್ರಮವಹಿಸುತ್ತೇನೆ. ಅಲ್ಲದೇ ಕಾಲೇಜಿಗೆ ಏನೆಲ್ಲಾ ಸೌಲಭ್ಯಗಳು ಬೇಕು ಮತ್ತು ಕಾಲೇಜಿನ ಉಪನ್ಯಾಸಕರು ಕಾಲೇಜಿನಲ್ಲಿ ಏನೆಲ್ಲಾ ಕೆಲಸಗಳಾಗಬೇಕು ಎಂದು ಬಯಸುತ್ತೀರೋ ಆ ಕೆಲಸಗಳನ್ನು ನಾನು ಐದು ವರ್ಷಗಳಲ್ಲಿ ಮಾಡುತ್ತೇನೆ. ಜೊತೆಗೆ ಕಾಲೇಜಿನಲ್ಲಿ ಮುಂದಿನ 25 ವರ್ಷ ಯಾವುದೇ ಸೌಲಭ್ಯಗಳನ್ನು ಕೇಳದಂತೆ ಅಭಿವೃದ್ಧಿ ಮಾಡಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ಧನಂಜಯ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ಸಚಿವರಲ್ಲಿ ಕಾಲೇಜು ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಮನವಿಯನ್ನು ಮಾಡಿದರು. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮವಹಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಆರ್.ರುದ್ರೇಶ್, ಪಿ.ಕೆ.ನಿಸರ್ಗ ಮತ್ತು ರಷಾ ಅವರನ್ನು ಸಚಿವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ಪ್ರೌಢಶಾಲೆ ವಿಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಅಮೃತ ಮತ್ತು ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜನಪದ ಕಲೆಗಳಾದ ವೀರಗಾಸೆ, ಪಟದ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ ಸೇರಿದಂತೆ ತಮಟೆ ತಂಡಗಳನ್ನು ಸಿದ್ಧಪಡಿಸಿಕೊಂಡು ಪಟ್ಟಣದ ಹೆದ್ದಾರಿಯಲ್ಲಿ ಆಯೋಜಿಸಿದ್ದ ಮೆರವಣಿಗೆ ಪ್ರದರ್ಶನ ನೀಡಿದ್ದು, ಸಾರ್ವಜನಿಕರ ಕಣ್ಮನ ಸೆಳೆಯಿತು. ಅಲ್ಲದೇ ಅಮೃತ ಮತ್ತು ಸುವರ್ಣ ಮಹೋತ್ಸವದ ಲಾಂಛನವನ್ನು ತೆರೆದ ವಾಹನದಲ್ಲಿರಿಸಿ ಪೂರ್ಣಕುಂಭದೊಂದಿಗೆ ಮೆರವಣಿಗೆ ಮಾಡಿದ್ದು, ವಿಶೇಷವಾಗಿತ್ತು. ಅಲ್ಲದೇ ಉದ್ಘಾಟನಾ ಸಮಾರಂಭದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಉಮೇಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್, ಬಿಇಒ ಸುರೇಶ್, ತಾ.ಪಂ ಇಒ ಚಂದ್ರಮೌಳಿ, ಕಾಲೇಜಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ಧನಂಜಯ್, ಸಿಪಿಐ ನಿರಂಜನ್, ಪ್ರಾಂಶುಪಾಲ ಎಂ.ಶಿವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಇದ್ದರು.




