ಕೆರೆಗಳ ಒತ್ತುವರಿ ತೆರೆವುಗೊಳಿಸುವುದು ಮತ್ತು ಕೆರೆಗಳ ಪುನರುಜ್ಜೀವನಗೊಳಿಸಿ, ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಭೆಯ ನೇತೃತ್ವದಲ್ಲಿ ವಹಿಸಿ ಮಾತನಾಡಿದರು. ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಜಿಲ್ಲಾ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಬೇಕು. ಈ ಮೂಲಕ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 962 ಕೆರೆಗಳಿದ್ದು, ಅದರಲ್ಲಿ ಜಿಲ್ಲಾ ಪಂಚಾಯತ್, ಕಾವೇರಿ ನೀರಾವರಿ ನಿಗಮ ವಿ.ಸಿ ವಿಭಾಗ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಹೇಮಾವತಿ ನಾಲಾ ಇಲಾಖೆಯ ವ್ಯಾಪ್ತಿಯ ಕೆರೆಗಳು ಒತ್ತುವರಿ ಆಗಿದ್ದರೆ ಅಂತಹವನ್ನು ತೆರೆವುಗೊಳಿಸಲಿಕ್ಕೆ ಸ್ಪಷ್ಟ ಸೂಚನೆ ನೀಡಿದ್ದೇವೆ. ಸರ್ವೆಯಿಂದ ಬಾಕಿ ಉಳಿದಿರುವ ಕರೆಯನ್ನು ಸರ್ವೆ ಮಾಡಲಿಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದ್ದು, ಅಷ್ಟರಲ್ಲಿ ಪೂರ್ಣಗೊಳಿಸಬೇಕು. ಎಲ್ಲೆಲ್ಲಿ ಕೆರೆ ಒತ್ತುವರಿ ಮಾಡಲಾಗಿದೆ ಅಲ್ಲಿ ಸರ್ವೆ ಮಾಡಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದರು.

ಕೆರೆ ಅಭಿವೃದ್ಧಿ ಹಾಗೂ ಸಂರಕ್ಷಣೆ ವಿಚಾರದಲ್ಲಿ ಅಧಿಕಾರಿ ನಿರ್ಲಕ್ಷ್ಯವಹಿಸಿದ್ದು ಕಂಡು ಬಂದರೆ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ಮಾತನಾಡಿ, ತೀವ್ರ ನೀರಿನ ಕೊರತೆ ನೀಗಿಸಲು ಹಾಗೂ ಸಸ್ಯ ಸಂಪತ್ತಿಗೆ, ಪ್ರಾಣಿ ಸಂಪತ್ತಿಗೆ ಕುಡಿಯುವುದಕ್ಕೆ ನೀರು ಮತ್ತು ಜಾನುವಾರುಗಳ ಬಳಕೆಗೆ ನೀರಿನ ಲಭ್ಯತೆಗಾಗಿ ಜಲಮೂಲವಾದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಕೆರೆಗಳ ಅಳತೆ ಪ್ರಕ್ರಿಯೆಗೆ ಒಂದು ತಿಂಗಳು ಗಡವು ನೀಡಿದ್ದು, ಅಷ್ಟರೊಳಗೆ ಅಳತೆ ಪ್ರಕ್ರಿಯೆ ಪೂರ್ಣಗೊಳಿಸಿ. ಜಿಲ್ಲೆಯಲ್ಲಿರುವ 962 ಕೆರೆಗಳಿಗೂ ಇಲಾಖೆ ಹಾಗೂ ತಾಲ್ಲೂಕುವಾರು ಪ್ರತ್ಯೇಕ ಕಡತ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ತಹಶೀಲ್ದಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.




