Friday, November 20, 2026

ಪ್ರಾಯೋಗಿಕ ಆವೃತ್ತಿ

ಸದನದ ಗಮನ ಸೆಳೆದರೆ ಶಾಸಕರಾಗಿದ್ದು ಸಾರ್ಥಕ- ನಂಜರಾಜೇಅರಸ್

ಒಬ್ಬ ಜನಪ್ರತಿನಿಧಿ ಆದವನು ತಾನು ಆಯ್ಕೆಯಾಗಿ ಬಂದಿರುವ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿ ಸದನದಲ್ಲಿ ತನ್ನ ಭಾಷಣದ ಮೂಲಕ ಗಮನ ಸೆಳೆಯಬೇಕು. ಆಗ ಮಾತ್ರ ಆತ ಶಾಸಕನಾಗಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಇತಿಹಾಸ ತಜ್ಞ  ಪ್ರೊ.ಪಿ.ವಿ. ನಂಜರಾಜೇಅರಸ್ ಹೇಳಿದರು.

ಮಂಡ್ಯ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಗರಿಕ ಸನ್ಮಾನ ಸಮಿತಿ ಹಾಗೂ ದೇವರ ಕಾಡು ಬಳಗದ ವತಿಯಿಂದ 2022ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ ಪರಿಷತ್ತಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ. ಶ್ರೀಕಂಠೇಗೌಡರಿಗೆ ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಆಯೋಜಿಸಿದ್ದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.

ಈ ಹಿಂದೆ ಶಾಸನಸಭೆಗೆ ಆಯ್ಕೆಯಾಗುತ್ತಿದ್ದ ಜನಪ್ರತಿನಿಧಿಗಳಿಗೆ ಮೌಲ್ಯಾಧಾರಿತ ಗುಣಗಳು ಹಾಗೂ ಸದನದಲ್ಲಿ ನಿರರ್ಗಳವಾಗಿ ಮಾತನಾಡುವ ಚಾಣಾಕ್ಷತೆ ಇತ್ತು. ಆದರೆ ಪ್ರಸ್ತುತ ಶಾಸಕರುಗಳಿಗೆ ಅಧ್ಯಯನದ ಕೊರತೆ ಇರುವುದರಿಂದ ಶಾಸನ ಸಭೆಯಲ್ಲಿ ಮೌಲ್ಯಯುತವಾಗಿ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿಗೆ ಅರ್ಹ ವ್ಯಕ್ತಿ ಕೆಟಿಎಸ್: ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಕೆ.ಟಿ. ಶ್ರೀಕಂಠೇಗೌಡರು ಸದನದಲ್ಲಿ ಹಲವು ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದರು. ಕೇವಲ ಅವರು ಆಯ್ಕೆಯಾಗಿ ಬಂದಿದ್ದ ಪದವೀಧರ ಕ್ಷೇತ್ರ ಮಾತ್ರವಲ್ಲದೆ, ಮಂಡ್ಯ ಜಿಲ್ಲೆಯ ರೈತರ ಸಮಸ್ಯೆ, ಮೈಶುಗರ್ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರಿಗೆ ಮಂಡ್ಯ ಜನತೆಯ ಪರವಾಗಿ ನಾಗರಿಕ ಅಭಿನಂದನೆ ಸಲ್ಲಿಸಲಾಯಿತು.

ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ, ಜಿ.ಬಿ. ಶಿವಕುಮಾರ್, ಎಂ. ಅಪ್ಪಾಜಿಗೌಡ, ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ. ಶಂಕರಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ, ರಾಜ್ಯ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ಕೆ.ಟಿ. ಶ್ರೀಕಂಠೇಗೌಡರ ಪತ್ನಿ ಬಿ.ಎಂ. ವೀಣಾ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ