Thursday, November 19, 2026

ಪ್ರಾಯೋಗಿಕ ಆವೃತ್ತಿ

ಇತಿಹಾಸದ ಪುಟ ಸೇರಿದ ಮಂಡ್ಯದ ”ನಂದಾ ಟಾಕೀಸ್”

ವರದಿ: ಶಿವಣ್ಣಮಂಗಲ, ಮಂಡ್ಯ

ಒಂದು ಕಾಲದಲ್ಲಿ ಮಂಡ್ಯದ ನಂದಾ ಟಾಕೀಸ್ ನಲ್ಲಿ ಸಿನಿಮಾ ನೋಡಲು ಗಂಟೆಗಟ್ಟಲೆ ಕ್ಯೂ ನಿಂತು, ಟಿಕೆಟ್ ಸಿಗದಿದ್ದರೆ ಒಂದಕ್ಕೆ ಹತ್ತುಪಟ್ಟು ಹಣ ಕೊಟ್ಟು ಬ್ಲಾಕ್ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡುತ್ತಿದ್ದ ಮಂಡ್ಯ ಸಿನಿರಸಿಕರ ಸಿನಿಮಾ ಟಾಕೀಸ್ ನಂದಾ, ಪ್ರೇಕ್ಷಕರ ಕೊರತೆಯಿಂದ ಸಿನಿಮಾ ಉದ್ಯಮ ಲಾಭದಾಯಕವೆನಿಸದೇ, ಅನೇಕ ತಿಂಗಳುಗಳಿಂದ ಬಾಗಿಲು ಮುಚ್ಚಿತ್ತು. ಈ ಸಿನಿಮಾ ಮಂದಿರದ ಜಾಗದಲ್ಲಿ ಈಗ ಬೃಹತ್ ಶಾಪಿಂಗ್ ಮಾಲ್ ತಲೆ ಎತ್ತಲಿದೆ.

ಇದಕ್ಕಾಗಿ ಕಳೆದ ಕೆಲವು ದಿನಗಳಿಂದ ಸಿನಿಮಾ ಟಾಕೀಸ್ ತೆರವು ಮಾಡುವ ಕಾರ್ಯಾಚರಣೆ ನಡೆದಿದೆ, ಈಗಾಗಲೇ ಸುತ್ತಲಿನ ಗೋಡೆ ಹೊರತುಪಡಿಸಿ, ಉಳಿದೆಲ್ಲಾ ಭಾಗವನ್ನು ಒಡೆದು ಹಾಕಲಾಗಿದೆ. ಆ ಚಿತ್ರಮಂದಿರದಲ್ಲಿ ಈಗಲೂ ನೆನಪಿನಲ್ಲಿ ಉಳಿಯಬಹುದಾದ ಹಲವು ಜನಪ್ರಿಯ ನಟರ ಚಲನಚಿತ್ರಗಳನ್ನು ನೋಡಿರುವ ಪ್ರೇಕ್ಷಕರಲ್ಲಿ ಕೆಲವರಿಗಾದರೂ, ಕಟ್ಟಡ ತೆರವು ದೃಶ್ಯ ನೋಡಿದರೆ, ಮನಸ್ಸಿಗೆ ಖೇದ ಉಂಟಾಗುತ್ತದೆ.

ನಾವು ಸಿನಿಮಾ ನೋಡುತ್ತಿದ್ದ ಈ ಸಿನಿಮಾ ಮಂದಿರಕ್ಕೆ ನಮ್ಮ ಕಣ್ಮುಂದೆಯೇ ಈ ದುರ್ಗತಿ ಬಂತಲ್ಲ ಎನ್ನುವ ನೋವು ಕೆಲವರನ್ನಾದರೂ ಕಾಡದಿರದು. ಇತ್ತೀಚಿನ ದಿನಗಳಲ್ಲಿ ಜನ ಸಿನಿಮಾಗಳನ್ನು ಟಾಕೀಸ್ ಗೆ ಬಂದು ನೋಡುವ ಪ್ರವೃತ್ತಿ ಕಡಿಮೆಯಾಗುತ್ತಿರುವುದು, ಇದಕ್ಕೆ ಪ್ರಮುಖ ಕಾರಣವಾಗಿದೆ.

ಈಗಾಗಲೇ ಮಂಡ್ಯದ ಗಿರಿಜಾ ಟಾಕೀಸ್ ಮುಚ್ಚಿ ಹಲವು ವರ್ಷಗಳೇ ಕಳೆದಿವೆ. ಸಿದ್ದಾರ್ಥ ಚಿತ್ರಮಂದಿರ ಶಾಪಿಂಗ್ ಮಾಲ್ ಆಗಿ ಪರಿವರ್ತನೆ ಆಗಿದೆ. ಧರ್ಮಶ್ರೀ ಚಿತ್ರಮಂದಿರ ಕಲ್ಯಾಣ ಮಂಟಪವಾಗಿದೆ. ಜಯಲಕ್ಷ್ಮಿ ಚಿತ್ರಮಂದಿರ ನಿಂತು ನಿಂತು ನಡೆಯುತ್ತಿದೆ. ಮಹಾವೀರ ಚಿತ್ರಮಂದಿರವೂ ಕೆಲವು ತಿಂಗಳು ಬಾಗಿಲು ಹಾಕಿ, ಸದ್ಯಕ್ಕೆ ನಡೆಯುತ್ತಿದೆ. ಚಿಕ್ಕಮಂಡ್ಯದ ರಾಮಕೃಷ್ಣ ಚಿತ್ರಮಂದಿರ ಗೋಡೌನ್ ಆಗಿದೆ, ಕಲ್ಲಹಳ್ಳಿ, ಹಾಲಹಳ್ಳಿ, ತಾವರಗೆರೆಯಲ್ಲಿದ್ದ ಸಿನಿಮಾ ಟೆಂಟ್ ಗಳು ಮುಚ್ಚಿ ಹತ್ತಾರು ವರ್ಷಗಳೇ ಕಳೆದಿವೆ. ಇದರ ಸಾಲಿಗೆ ನಂದಾ ಚಿತ್ರಮಂದಿರ ಸೇರುತ್ತಿರುವುದು ಸಿನಿರಸಿಕರಲ್ಲಿ ಬೇಸರವನ್ನು ಉಂಟು ಮಾಡಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ