Friday, November 20, 2026

ಪ್ರಾಯೋಗಿಕ ಆವೃತ್ತಿ

ಚಂದ್ರಯಾನ ಯಶಸ್ವಿಗೆ ಟಿಪ್ಪು ಸುಲ್ತಾನ್ ಮುನ್ನುಡಿ..!

ಚಂದ್ರಯಾನ -3 ಯಶಸ್ವಿಯಾಗಿದೆ. ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಕಾಲಿಟ್ಟ ಕ್ಷಣದಲ್ಲಿಯೇ ಭಾರತ ಬಾಹ್ಯಕಾಶ ವಿಜ್ಞಾನದಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಿ ಹೊಸ ಇತಿಹಾಸ ನಿರ್ಮಿಸಿತು. ಭಾರತದಿಂದ ಹೊಸ ದಾಖಲೆ ಸೃಷ್ಟಿ, ಬಾಹ್ಯಾಕಾಶದಲ್ಲಿ ಭಾರತದ ಸುವರ್ಣಯುಗ ಆರಂಭ, ಸೂಪರ್ ಪವರ್, ಚಂದಿರನ ದಕ್ಷಿಣಾ ಪಥೇಶ್ವರ, ಚಂದ್ರನ ಅಂಗಳದ ಮೇಲೆ ಕಾಲಿಟ್ಟ 4ನೇ ದೇಶ ಎಂದೆಲ್ಲಾ ಭಾರತವನ್ನು ಹಾಡಿ ಹೊಗಳಿ ಸಂಭ್ರಮಿಸುತ್ತಿದ್ದಾರೆ.

ಇಂದು ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಡುವ ಮೂಲಕ ಬಾಹ್ಯಾಕಾಶ ವಿಜ್ಞಾನದಲ್ಲಿ ದಾಖಲೆ ಬರೆದಿದ್ದಕ್ಕೆ ನಮ್ಮ ವಿಜ್ಞಾನಿಗಳೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ನೆಲದ ವಿಜ್ಞಾನಿಗಳ ಸಾಧನೆಯ ಸಂಭ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ, ಕ್ಷಿಪಣಿ ಜನಕ ಟಿಪ್ಪು ಸುಲ್ತಾನ್ ಅವರನ್ನು ನೆನೆಯಬೇಕಿದೆ.

“>

ಇಡೀ ಜಗತ್ತಿಗೆ ಮೊದಲು ರಾಕೆಟ್ ತಂತ್ರಜ್ಞಾನವನ್ನು ತೋರಿಸಿಕೊಟ್ಟವರು ನಮ್ಮ ಕನ್ನಡದ ಟಿಪ್ಪು ಸುಲ್ತಾನ್. ಇಡೀ ಜಗತ್ತಿನ ಮೊದಲ ರಾಕೆಟ್ ಉಡಾವಣಾ ಕೇಂದ್ರ ಇರುವುದು ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ.

ಭಾರತದ ರಾಕೆಟ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ನಾಸಾದ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ, ಬ್ರಿಟಿಷರ ವಿರುದ್ದ ಟಿಪ್ಪು ರಾಕೆಟ್ ಬಳಸಿದ ವರ್ಣಚಿತ್ರವನ್ನು ದೊಡ್ಡದಾಗಿ ಪ್ರದರ್ಶಿಸಲಾಗಿತ್ತು. ಅಲ್ಲಿಂದ ಭಾರತಕ್ಕೆ ಬಂದ ಎಪಿಜೆ ಅಬ್ದುಲ್ ಕಲಾಂ ನೇರವಾಗಿ ಶ್ರೀರಂಗಪಟ್ಟಣಕ್ಕೆ ಬಂದು ಟಿಪ್ಪುವಿನ ರಾಕೆಟ್ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಕ್ಕಾಗಿ ರಾಕೆಟ್ ಬಳಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ರಾಕೆಟ್ ಗಳನ್ನು ಸೃಷ್ಟಿಸಿ ಅದಕ್ಕೆಂದೇ ಸೈನ್ಯದಲ್ಲಿ “ರಾಕೆಟ್ ಪಡೆ”ಯನ್ನು ಸ್ಥಾಪಿಸಿದರು. ಈ ರೀತಿಯ ರಾಕೆಟ್ ಪಡೆಯನ್ನು ಜಗತ್ತಿನಲ್ಲಿ ಮೊದಲು ಸ್ಥಾಪಿಸಿ ಯಶಸ್ವಿಯಾಗಿದ್ದು ನಮ್ಮ ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್.

ಬಾಹ್ಯಾಕಾಶ ವಿಜ್ಞಾನಕ್ಕೆ ಅಂದು ಟಿಪ್ಪು ಬರೆದ ಮುನ್ನುಡಿಯೇ ಇಂದು ಎಲ್ಲಾ ದೇಶಗಳ ವಿಜ್ಞಾನಿಗಳ ಬಾಹ್ಯಾಕಾಶ ಯಶಸ್ಸಿಗೆ ಕಾರಣ. ಬ್ರಿಟಿಷರು ಸೇರಿದಂತೆ ಅಂದಿನ ಜಗತ್ತಿನ ಎಲ್ಲಾ ಮುಂದುವರೆದ ರಾಷ್ಟ್ರಗಳು ಟಿಪ್ಪುವಿನ ರಾಕೆಟ್ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು. ಅಂದು ಟಿಪ್ಪುವಿನಿಂದ ಆರಂಭವಾದ ರಾಕೆಟ್ ತಂತ್ರಜ್ಞಾನವು ಇಂದು ನಮ್ಮನ್ನು ಮಂಗಳ, ಚಂದ್ರಯಾನದವರೆಗೆ ತಂದು ಮುಟ್ಟಿಸಿದೆ.

ಇಂದು ಭಾರತವು ರಾಕೆಟ್ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದುವರೆದ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲಲು ಟಿಪ್ಪು ಸುಲ್ತಾನ್ ಮೂಲ ಕಾರಣ. ಟಿಪ್ಪು ಯುದ್ದಕ್ಕೆ ಬಳಸಿದ ರಾಕೆಟ್ ತಂತ್ರಜ್ಞಾನವನ್ನೇ ಅಭಿವೃದ್ದಿಪಡಿಸಿ ಪಾಶ್ಚಾತ್ಯರು ಉಪಗ್ರಹ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಯಶಸ್ಸು ಸಾಧಿಸಿದರು.

ಈ ಹಿಂದೆ ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರು ಕರ್ನಾಟkಕ್ಕೆ ಭೇಟಿ ನೀಡಿದ್ದಾಗ ಟಿಪ್ಪು ಸುಲ್ತಾನ್ ರಾಕೆಟ್ ತಂತ್ರಜ್ಞಾನ ಮತ್ತು ಸಾಧನೆ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲೇ ಹಾಡಿ ಹೊಗಳಿದ್ದರು ಎಂಬುದು ಟಿಪ್ಪು ಸಾಧನೆ ಎಂತಹದ್ದು ಎಂಬುದನ್ನು ಸಾರಿ ಹೇಳುತ್ತದೆ.

ದೇಶದಲ್ಲಿಂದು ಕೋಮು ಭಾವನೆ ಇಲ್ಲದೆ ಇದ್ದಿದ್ದರೆ ಇವತ್ತು ಭಾರತ ಚಂದ್ರಯಾನದಲ್ಲಿ ಯಶಸ್ಸು ಸಾಧಿಸಿರುವ ಹಿನ್ನಲೆಯಲ್ಲಿ ಪ್ರಪಂಚದ ರಾಕೆಟ್ ಜನಕ ಟಿಪ್ಪುವಿನ ನಾಡು ಶ್ರೀರಂಗಪಟ್ಟಣದಲ್ಲಿ ಸಂಭ್ರಮ, ಹರ್ಷೋದ್ಘಾರ ಮುಗಿಲು ಮುಟ್ಟಿರಬೇಕಿತ್ತು. ನಾಸಾ ಸಹ ಟಿಪ್ಪುವನ್ನು ಗೌರವಿಸುತ್ತದೆ. ಆದರೆ ಪ್ರಪಂಚದ ಮೊದಲ ರಾಕೆಟ್ ಉಡಾವಣಾ ಸ್ಥಳವಾದ ಶ್ರೀರಂಗಪಟ್ಟಣದಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲದಿರುವುದು ಬೇಸರದ ವಿಷಯವಾಗಿದೆ. ಟಿಪ್ಪು ಸುಲ್ತಾನ್ ಅವರನ್ನು ಈ ಸಂದರ್ಭದಲ್ಲಿ ಸ್ಮರಣೆ ಮಾಡಬೇಕಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ