ಚಂದ್ರಯಾನ -3 ರ ಯಶಸ್ವಿ ಕಾರ್ಯಾಚರಣೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಆಕಾಶ್ ಮತ್ತು ವಿನೋದ್ ರಾಜ್ ಎಂಬ ಕಿರಿಯ ವಿಜ್ಞಾನಿಗಳು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ನಿವಾಸಿ ದಿ.ಟೈಲರ್ ಬಾಲಾಜಿ ಮತ್ತು ಭಾಗ್ಯಮ್ಮ ದಂಪತಿಗಳ ಪುತ್ರ ಆಕಾಶ್ ಇಸ್ರೋ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಸಹೊಳಲು ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿ ನಂತರ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಮುಗಿಸಿ ನಂತರ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, 2008 ಎಪ್ರಿಲ್ ತಿಂಗಳಿನಲ್ಲಿ ಇಸ್ರೋ ಅಂಗಸಂಸ್ಥೆ ಇಸ್ಟ್ಯಾಕ್ ಮೂಲಕ ಆಕಾಶ್ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿ ಮಾರ್ಗದರ್ಶಕರ ಸೂಚನೆಯಂತೆ ಕರ್ತವ್ಯ ನಿರ್ವಹಿಸಿ, ಚಂದ್ರಯಾನ -3 ಕಾರ್ಯಾಚರಣೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಯಶಸ್ಸಿನಲ್ಲಿ ಪಾಲು ಪಡೆದಿದ್ದಾರೆ.
ಮತ್ತೊಬ್ಬ ವಿಜ್ಞಾನಿ ವಿನೋದ್ ರಾಜ್, ತೆರ್ನೇನಹಳ್ಳಿ ಗ್ರಾಮದ ರೈತ ಜಯರಾಂ ಮತ್ತು ರತ್ನಮ್ಮ ದಂಪತಿಗಳ ಪುತ್ರರಾಗಿದ್ದು, ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಬೊಮ್ಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಫ್ರೌಢ ಶಿಕ್ಷಣವನ್ನು ಹರಿಹರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿ, ಕೆ.ಆರ್. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ 2013 ರಲ್ಲಿ ಇಸ್ರೋದಲ್ಲಿ ಕೆಲಸಕ್ಕೆ ಸೇರಿದ್ದರು. ಚಂದ್ರಯಾನ -2 ರಲ್ಲಿಯೂ ಇವರು ಭಾಗಿಯಾಗಿದ್ದರು, ಪ್ರಸ್ತುತ ಚಂದ್ರಯಾನ -3 ರಲ್ಲಿ ಡೀಪ್ ಸ್ವೇಸ್ ನೆಟ್ ವರ್ಕ್ ವಿಭಾಗದಲ್ಲಿ ಆಂಟೇನಾ ಡಿಸೈನಿಂಗ್ ಕ್ಷೇತ್ರದಲ್ಲಿ ತಮ್ಮ ಮಾರ್ಗದರ್ಶಕರ ಹಾಗೂ ತಂಡದ ಸದಸ್ಯರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ವಿಜ್ಞಾನಿಗಳನ್ನು ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ,ಬಿ.ಪ್ರಕಾಶ್, ಬಿ.ಎಲ್.ದೇವರಾಜ್, ಜಾನಕಿ ರಾಮ್, ಸಮಾಜ ಸೇವಕರಾದ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ವಿಜಯ್ ರಾಮೇಗೌಡ, ಮನ್ ಮುಲ್ ನಿರ್ದೇಶಕ ಡಾಲು ರವಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.




