‘ಪೇಪರ್ ಕ್ರಾಫ್ಟ್ ಕಲೆ ನನಗೆ ಬಾಲ್ಯದ ನೆನಪನ್ನು ನೀಡಿತು’, ‘ ನಾನು ಬಾಲ್ಯಕ್ಕೆ ಹೋಗಿ ಸಂತೋಷಪಟ್ಟಂತಾಯ್ತು’ ಎಂದು ಶಾಸಕರಾದ ಪಿ. ರವಿಕುಮಾರ್ ಗಣಿಗ ರವರು ಹೇಳಿದರು.
‘ಅನುಭೂತಿ ‘ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ (ರಿ ), ಮಂಡ್ಯ ವತಿಯಿಂದ ಏರ್ಪಡಿಸಿದ್ದ ‘ಪೇಪರ್ ಕ್ರಾಫ್ಟ್ ‘ ( ಒರಿಗಾಮಿ – ಕಿರಿಗಾಮಿ ) ತರಬೇತಿ ಕಾರ್ಯಕ್ರಮದಲ್ಲಿ ‘ ಚಿಟ್ಟೆಗಳ 3D ಪಾಪ್ ಅಪ್ ಕ್ರಾಫ್ಟ್ ಅನ್ನು ಅನಾವರಣಗೊಳಿಸಿ ಹಾಗೂ ಕಾಗದದ ಎರೋಪ್ಲೇನ್ ಗಳನ್ನು ಹಾರಿಸಿ, ಕಾಗದದ ದೋಣಿಗಳನ್ನು ನೀರಿನಲ್ಲಿ ತೇಲಿಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೇಪರ್ ಕ್ರಾಫ್ಟ್ ಅಂತಹ ಕಲೆಗಳು ಮಕ್ಕಳ ಸೃಜನಶೀಲತೆಯನ್ನು ಹೆಚ್ಚು ಮಾಡಿ ಸಂತೃಪ್ತ ಜೀವನ ನಡೆಸಲು ನೆರವಾಗುತ್ತವೆ, ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು, ನನ್ನ ನೆರವು ಇದ್ದೇ ಇರುತ್ತದೆ ಎಂದು ಹೇಳಿದರು.
ಮಂಡ್ಯ ಅಭಿವೃದ್ಧಿಗೆ ಶ್ರಮಿಸುತ್ತೇನೆ, ವಿ. ವಿ. ನಗರ ಬಡಾವಣೆಯ ಸಾರ್ವಜನಿಕರ ಕೋರಿಕೆಯಂತೆ ಉದ್ಯಾನವನದ ನಿರ್ಮಾಣ, ಚರಂಡಿ, ರಸ್ತೆಗಳ ಅಭಿವೃದ್ಧಿ, ನೀರಿನ ಬಿಲ್ ತಿಂಗಳಿಗೆ 220 ಕ್ಕೆ ನಿಗದಿಗೊಳಿಸುವುದು ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಿ ಕೊಡುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ. ಎಂ. ದ್ಯಾವಪ್ಪ ಅನುಭೂತಿ ಸಂಸ್ಥೆಯ ಸೋಮವರದ ರವರು ಮಕ್ಕಳ ಸಾಂಸ್ಕೃತಿಕ, ಶೈಕ್ಷಣಿಕ, ಕಲಾತ್ಮಕ ಅಭಿರುಚಿ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸುತ್ತಿರುತ್ತಾರೆ ಇದು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿ ಎಂದರು.
ಲೇಖಕ ಕೆ. ಮಾಯಿಗೌಡರವರು ಅನುಭೂತಿ ಟ್ರಸ್ಟ್ ಮಕ್ಕಳ ಜ್ಞಾನ ವಿಕಾಸ, ಸೃಜನಶೀಲತೆಯನ್ನು ಉತ್ತೇಜಸುವ ಕಲೆ, ವಿಜ್ಞಾನ, ಸಾಹಿತ್ಯ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದು ಉತ್ತಮ ಬೆಳವಣಿಗೆ ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಸಂಪನ್ಮೂಲವ್ಯಕ್ತಿಯಾಗಿ ಎಸ್. ಲೋಕೇಶ್ ರವರು ಮಕ್ಕಳಿಗೆ ಒರಿಗಾಮಿ – ಕಿರಿಗಾಮಿ ಕ್ರಾಫ್ಟ್ ಕಲೆಯ ಮಹತ್ವ, ಅವುಗಳ ಅದ್ಭುತ ವಿನ್ಯಾಸಗಳು, ರಚನಾವಿಧಾನಗಳ ಚಿತ್ರಣಗಳನ್ನು ತೋರಿಸಿ ಮಕ್ಕಳಲ್ಲಿ ಕುತೂಹಲ ಆಸಕ್ತಿ ಹೆಚ್ಚುವಂತೆ ಮಾಡಿದರು.
ಚಿತ್ರಕಲಾವಿದ ಎಂ.ಎಲ್. ಸೋಮವರದ ಬಾಲ್ಯದಲ್ಲಿ ಸಂತೋಷ, ಸಂಭ್ರಮ, ನಲಿವನ್ನು ಉಂಟುಮಾಡುವ ಕಾಗದ ಕಲೆ- ಸೃಜನಶೀಲ ಶಿಕ್ಷಣ, ಕೈಗಾರಿಕಾ ಕ್ಷೇತ್ರ, ಕಟ್ಟಡವಿನ್ಯಾಸ, ಏರ್ ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್ ಗಳಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.
ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಕಾಗದ ಕಲೆ ರೂಢಿಗತವಾದರೆ ಅವರ ಭವಿಷ್ಯವೇ ಸುಂದರವಾಗಿ ರೂಪುಗೊಳ್ಳುತ್ತದೆ ಎಂದರು.
ಪೇಪರ್ ಕ್ರಾಫ್ಟ್, ಕಾರ್ಯಕ್ರಮ ದಲ್ಲಿ ಕಲಾಸಕ್ತ ಮಕ್ಕಳು, ಬೆಂಜಮಿನ್ ಕಿಟ್ಟಿ, ಸಣ್ಣಯ್ಯ, ಜಯಶೀಲಮ್ಮ, ರವಿ, ಅಶ್ವಿನಿ ಕುಮಾರ್, ಇನ್ನಿತರರು ಉಪಸ್ಥಿತರಿದ್ದರು.




