ಮಣಿಪುರ ರಾಜ್ಯದಲ್ಲಿ ಒಂದು ಸಮುದಾಯದ ಮಹಿಳೆಯರು ಮತ್ತು ಮಕ್ಕಳು ಮತ್ತು ಅಮಾಯಕ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾಚಾರ ನಡೆಸುತ್ತಿದ್ದು, ಕೂಡಲೇ ಅಲ್ಲಿನ ಸರ್ಕಾರ ಮುಗ್ಧ ಜನರನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಕನ್ನಡ ಕ್ರೈಸ್ತ ರಕ್ಷಣಾ ವೇದಿಕೆ ಕಾರ್ಯಕರ್ತರು ನಾಗಮಂಗಲ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಾಗಮಂಗಲ ತಾಲ್ಲೂಕಿನ ಶಿಕಾರಿಪುರ ಹಕ್ಕಿಪಿಕ್ಕಿ ಜನಾಂಗದ ಕನ್ನಡ ಕ್ರೈಸ್ತ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಟಿ.ಬಿ ಬಡಾವಣೆ ವೃತ್ತದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಜೈ ಸಾಂಬರ್ ಮಾತನಾಡಿ, ಮಣಿಪುರ ರಾಜ್ಯದಲ್ಲಿ ಬಡ ಜನರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗುತ್ತಿದೆ, ದೇಶದ ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ವಹಿಸಿ ಮಹಿಳೆಯರು, ಮಕ್ಕಳು ಹಾಗೂ ಕುಟುಂಬಗಳ ರಕ್ಷಣೆಗೆ ಮುಂದಾಗಬೇಕು. ಕ್ರೈಸ್ತ ಸಮುದಾಯದ ಚರ್ಚ್ ಗಳ ಮೇಲೆ ದುಷ್ಟರು ನಿರಂತರ ದಾಳಿ ಮಾಡುತ್ತಿದ್ದು, ಪ್ರಾರ್ಥನಾಲಯದ ಮೇಲಿನ ದಾಳಿ ತಡೆಗಟ್ಟಬೇಕೆಂದು ಒತ್ತಾಯಿಸಿದರು.
ಮುಖಂಡ ಜೋಸೆಫ್ ಸ್ಟಿಫನ್ ಮಾತನಾಡಿ, ಮಣಿಪುರದಲ್ಲಿ ನಡೆದ ಮಹಿಳಾ ದೌರ್ಜನ್ಯ ಗಲಭೆಗಳಿಂದ ಸಾವಿರಾರು ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ, ಬಡಜನರ ಮನೆಗಳನ್ನ ನಾಶ ಮಾಡಲಾಗಿದೆ, ಚರ್ಚ್ ಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ, ಅಮಾಯಕ ಕುಟುಂಬಗಳಿಗೆ ರಕ್ಷಣೆ ನೀಡಿ ಚರ್ಚ್ ಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.
ದಾಳಿಕೋರರನ್ನು ಸರ್ಕಾರ ಬಂಧಿಸಿ ಶಿಕ್ಷಿಸಬೇಕು, ಮಣಿಪುರದ ನಿರಾಶ್ರಿತ ಜನತೆ ಶಾಂತಿಯಿಂದ ನೆಲೆಸುವಂತೆ ಎಲ್ಲಾ ರೀತಿಯ ಕ್ರಮವಹಿಸಬೇಕೆಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಆಂಟೋನಿ ದಾಸ್, ಡೇವಿಡ್, ರಾಜಪುತ್ರ ಮತ್ತಿತರರು ನೇತ್ರತ್ವವಹಿಸಿದ್ದರು




