ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಂಡ್ಯ ಯೂತ್ ಗ್ರೂಪ್ ಸಂಘಟನೆ ಕಾರ್ಯಕರ್ತರು ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯದ ನೆಹರು ನಗರದಿಂದ ಹೊರಟ ಯೂತ್ ಗ್ರೂಪ್ ಸದಸ್ಯರು ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಕಾವೇರಿ ಅನ್ಯಾಯ- ಕಣ್ಣಿಲ್ಲದ ಕಾನೂನು ಎಂಬ ಘೋಷವಾಕ್ಯವಿರುವ ಬ್ಯಾನರ್ ಹಿಡಿದುಕೊಂಡು ನಗರದ ವಿವಿಧ ಬೀದಿಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜಾಥಾ ನಡೆಸಿದರು.
ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗಲು ರಾಜಕೀಯ ಪಕ್ಷಗಳೇ ಕಾರಣ. ನದಿ ನೀರಿನ ವಿಚಾರದಲ್ಲಿ ಒಗ್ಗಟ್ಟಿನಿಂದ ಹೋರಾಟಕ್ಕಿಳಿಯದಿರುವುದು ತಮಿಳುನಾಡಿಗೆ ಅನುಕೂಲಕರ ವಾತಾವರಣ ಕಲ್ಪಿಸಿಕೊಟ್ಟಿದೆ.
ಸಂಕಷ್ಟ ಪರಿಸ್ಥಿತಿ ಎದುರಾದಾಗ ಸರ್ಕಾರಗಳು ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಕಡೆ ಬೊಟ್ಟು ಮಾಡುವ ಬದಲು ರೈತರ ಹಿತ ಕಾಪಾಡಲು ನಾವು ಹೇಗೆ ಕಾನೂನಾತ್ಮಕ ಹೆಜ್ಜೆ ಇಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕು. ಹವಾಮಾನ ಇಲಾಖೆ ವರದಿಯನ್ನು ಮುಂದಿಟ್ಟುಕೊಂಡು ತಮಿಳುನಾಡು ನೀರಿಗಾಗಿ
ಅರ್ಜಿ ಸಲ್ಲಿಸುವ ಮುನ್ನವೇ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಮಳೆ ಉತ್ತಮವಾಗಿ ಬಿದ್ದಲ್ಲಿ ಆ ನೀರನ್ನು ತಡೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಮಳೆಯೇ ಬೀಳದಿದ್ದಾಗ ನೀರು ಹರಿಸಿ ಎಂದು
ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಂಕಷ್ಟ ಕಾಲದಲ್ಲಿ ಎರಡೂ ರಾಜ್ಯಗಳ ನಡುವೆ ಉದ್ಭವಿಸಿರುವ ಜಲವಿವಾದವನ್ನು ಪರಿಹರಿಸಲು ಕೇಂದ್ರಸರ್ಕಾರ ಮಧ್ಯಪ್ರವೇಶಿಸಬೇಕು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೂರಿಸಿ ಸಂಕಷ್ಟ ಸೂತ್ರ ರೂಪಿಸಲು ಆಸಕ್ತಿ ವಹಿಸಬೇಕು.ಈಗಾಗಲೇ ತಮಿಳುನಾಡಿಗೆ ನೀರು ಹರಿಸಿ ಜಲಾಶಯದ ಮಟ್ಟ 101 ಅಡಿ ಮುಟ್ಟಿದೆ.ಪ್ರತಿದಿನ 5 ಸಾವಿರ ಕ್ಯೂಸೆಕ್ನಂತೆ ನೀರು ಹರಿಸಿದರೆ 7 ಟಿಎಂಸಿ ನೀರು ಖಾಲಿಯಾಗಲಿದೆ.ಇದರಿಂದ ಹಲವು ಜಿಲ್ಲೆಗಳ ಜನರು ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಆದ್ದರಿಂದ
ಕರ್ನಾಟಕ-ತಮಿಳುನಾಡು ರೈತರು ಜಗಳವಾಡುವುದಕ್ಕೆ ಅವಕಾಶ ನೀಡದೆ ಇಬ್ಬರೂ ನೀರನ್ನು ಸಮಾನವಾಗಿ ಹಂಚಿಕೆಯಾಗುವಂತೆ ಸೂತ್ರ ರೂಪಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದರ್ಶನ್, ನವೀನ್, ಪ್ರವೀಣ್, ಸೈಯದ್ ಇಮ್ರಾನ್, ಆರ್ಷದ್, ಖಾಸಿಂ, ವಿನಯ್ಗೌಡ, ಮಂಜು, ವಿನಯ್, ಪ್ರತಾಪ್, ದೀಪು ಮತ್ತಿತರರಿದ್ದರು.




