ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ ವಿರೋಧಿಸಿ ಮಂಡ್ಯ ನಗರದಲ್ಲಿ ಜಿಲ್ಲಾ ರೈತ ರಕ್ಷಣಾ ಸಮಿತಿ ನಡೆಸುತ್ತಿರುವ ಎರಡನೇ ದಿನದ ಹೋರಾಟದಲ್ಲಿ ಜೆಡಿಎಸ್ ನಾಯಕ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭಾಗವಹಿಸಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನನ್ನ ಜಿಲ್ಲೆಗೆ ಅನ್ಯಾಯವಾಗಲು ಬಿಡುವುದಿಲ್ಲ, ಹಿಂದೆ ಜಿ.ಮಾದೇಗೌಡರ ನೇತೃತ್ವದಲ್ಲಿ ನಾವೆಲ್ಲ ಪಕ್ಷಾತೀತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ, ಈಗಲೂ ಎಲ್ಲರೂ ಒಟ್ಟಾಗಿ ಮುನ್ನೆಡೆಯೋಣ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸೋಣ ಎಂದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹೋರಾಟದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚಾಗಿದೆ, ಅವರೇ ಈ ಹೋರಾಟದ ಮುಂದಾಳತ್ವವಹಿಸಬೇಕು. ಸಂಸದರು ಹೋರಾಟದಲ್ಲಿ ಭಾಗಿಯಾಗಬೇಕು. ನಾಳೆ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ರ್ಯಾಲಿ ನಡೆಸಲಿದ್ದೇವೆ, ರೈತ ವಿರೋಧಿ ಸರ್ಕಾರಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ನಾನು ಜೆಡಿಎಸ್ ನಲ್ಲಿ ಸಕ್ರಿಯವಾಗಿದ್ದೇನೆ, ಕುಪ್ಪೆಂದ್ರ ರೆಡ್ಡಿ ಹಾಗೂ ನಾನು ಎರಡ್ಮೂರು ದಿನಗಳ ಕಾಲ ಮಡಿಕೇರಿಯಲ್ಲಿದ್ದು ರಾಜ್ಯದ ಜನತೆಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿ ಬಂದಿದ್ದೇವೆ, ನಾವು ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ, ಸದ್ಯದಲ್ಲಿ ಕಾವೇರಿ ಹೋರಾಟವೇ ನಮ್ಮ ಮುಂದಿರುವ ಆಯ್ಕೆ ಎಂದು ಪ್ರತಿಕ್ರಿಯಿಸಿದರು.




