Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ಒಡಲಿನ ಸಂಕಷ್ಟ ಅರಿಯುವಲ್ಲಿ ಸರ್ಕಾರ ವಿಫಲ- ಜಿ.ಟಿ ದೇವೇಗೌಡ

ಬರಿದಾಗಿರುವ ಕಾವೇರಿ ಒಡಲಿನ ಸಂಕಷ್ಟ ಪರಿಸ್ಥಿತಿಯನ್ನು ಅರ್ಥೈಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು. ಅಣೆಕಟ್ಟೆ ಖಾಲಿಯಾದರೆ ರಾಜ್ಯದ ರೈತರು ಉಳಿಯುವುದಿಲ್ಲ, ಅನ್ನದಾತ ಶಾಪದಿಂದ ಅಧಿಕಾರಸ್ಥರಿಗೆ ಉಳಿಗಾಲವಿರುವುದಿಲ್ಲ ಎಂದು ಜೆಡಿಎಸ್  ಪಕ್ಷ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಸಿದರು.

ತಮಿಳುನಾಡಿಗೆ ಕನ್ನಂಬಾಡಿ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವ ಕ್ರಮ ವಿರೋಧಿಸಿ ಜಿಲ್ಲಾ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ರಾಜ್ಯದ ಹಿತವನ್ನು ಬಲಿಕೊಟ್ಟು ಮುಂದಿನ ಲೋಕಸಭಾ ಚುನಾವಣೆ ಮೈತ್ರಿಗಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಮೆಚ್ಚಿಸಲು ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ತಾಕತ್ತು ಪ್ರದರ್ಶಿಸಿ ನೀರು ನಿಲ್ಲಿಸಿದರೆ, ಅವರೊಂದಿಗೆ ನಾವು ನಿಲ್ಲುತ್ತೇವೆ ಎಂದರು.

ಲೋಕಸಭೆಗಾಗಿ ರೈತರ ಹಿತ ಕಡೆಗಣನೆ-ಸುರೇಶ್ ಗೌಡ

ಮುಖ್ಯಮಂತ್ರಿ ಮೌನವಾಗಿ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟಿದ್ದಾರೆ. ತಮಿಳುನಾಡಿಗೆ 13 ಟಿಎಂಸಿ ನೀರು ಹರಿಸಿದ ತರುವಾಯ ಸರ್ವಪಕ್ಷ ಸಭೆ ಕರೆದು, ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ. ಭವಿಷ್ಯದ ಲೋಕಸಭಾ ಚುನಾವಣೆಗಾಗಿ ರಾಜ್ಯದ ರೈತರ ಹಿತವನ್ನು ಕಡೆಗಣಿಸಿದ್ದಾರೆಂದು ಮಾಜಿ ಶಾಸಕ ಕೆ.ಸುರೇಶ್ ಗೌಡ ವಾಗ್ದಾಳಿ ನಡೆಸಿದದರು.

ರಾಜ್ಯದ ರೈತರ ಹಿತಕ್ಕೋಸ್ಕರ ರೈತರು ಮತ್ತು ಪಕ್ಷದ ಕಾರ್ಯಕರ್ತರೊಟ್ಟಿಗೆ ಪ್ರತಿಭಟನೆ ನಡೆಸುವಂತೆ ಆನಾರೋಗ್ಯದ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ವರುಣನ ಕೃಪೆ ಬೇಡಿ ಮಾಜಿ ಪ್ರಧಾನಿ ದೇವೇಗೌಡರು ಹೊಳೆನರಸೀಪುರದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕ, ಮಾಜಿ ಶಾಸಕರುಗಳು ಮತ್ತು ಇತರೆ ಜನಪ್ರತಿನಿಧಿಗಳು ನಡೆಸುತ್ತಿರುವ ಹೋರಾಟಕ್ಕೆ ಬಲ ತುಂಬಲು ನಾನೂ ಭಾಗಿಯಾಗಿದ್ದೇನೆಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾವೇರಿ ವಿಚಾರದಲ್ಲಿ ಸಾಕಷ್ಟು ಅನುಭವವಿದ್ದರೂ ಕಾವೇರಿ ಪ್ರಾಧಿಕಾರದ ಮುಂದೆ ನಮ್ಮ ಸಂಕಷ್ಟ, ವರುಣನ ಅವಕೃಪೆ, ಜಲಾಶಯದ ಸ್ಥಿತಿಗತಿ ಕುರಿತು ಮನವಿ ಸಲ್ಲಿಸದೇ ಸುಪ್ರಿಂ ಕೋರ್ಟಿಗೆ ಅರ್ಜಿ ಹಾಕಿರುವುದು ಸರಿಯಾದ ಕ್ರಮವಲ್ಲ ಎಂದರು.

ನೆಲ – ಜಲದ ಶೋಷಣೆ- ಹೆಚ್.ಟಿ.ಮಂಜು

ರಾಜ್ಯದ ನೆಲ – ಜಲ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಶೋಷಣೆ ಮಾಡುತ್ತಿದೆ. ರೈತರಿಗೆ ನೀರು ನೀಡಲು ಷರತ್ತು ವಿಧಿಸುವ ಸರ್ಕಾರ, ತಮಿಳುನಾಡಿಗೆ ನೀರು ಹರಿಸಲು ಯಾವುದೇ ಮಾನದಂಡ ಬಳಸದಿರುವುದು ನ್ಯಾಯೋಚಿತವೇ ಎಂದು ಶಾಸಕ ಹೆಚ್.ಟಿ ಮಂಜು ಪ್ರಶ್ನಿಸಿದರು.

5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನಸಾಮಾನ್ಯರನ್ನು ಶಿವ ಶಿವ ಎನ್ನುವ ಪರಿಸ್ಥಿತಿಗೆ ತಂದೊಡ್ಡಿರುವ ರಾಜ್ಯ ಸರ್ಕಾರ ಹಾಗೂ ಕಾವೇರಿ ಸಂಕಷ್ಟದ ಬಗ್ಗೆ ಮೌನ ಮುರಿಯದ ರಾಜ್ಯದ ಸಂಸದರು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮುಖ್ಯಮಂತ್ರಿಯಾಗಲು ಜಿಲ್ಲೆಯ ಜನರ ಮತಯಾಚಿಸಿದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಮನುಷ್ಯತ್ವ ಮತ್ತು ಮಾನವೀಯತೆ ಮರೆತು ಅಧಿಕಾರ ಉಳಿಸಿಕೊಳ್ಳಲು ಕಾವೇರಿ ಭಾಗದ ರೈತರ ಹಿತವನ್ನು ಬಲಿ ಕೊಟ್ಟಿದ್ದಾರೆಂದು ತಿರುಗೇಟು ನೀಡಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಶಾಸಕರು ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ರೈತರ ಆಕ್ರೋಶದ ಬೆಂಕಿ ಚೆಂಡನ್ನು ವಿಧಾನಸೌಧಕ್ಕೆ ಎಸೆದರೆ, ಆಡಳಿತ ನಡೆಸುವವರು ಸುಟ್ಟು ಹೋಗುತ್ತಾರೆ. ರೈತರ ಜ್ವಾಲೆಗೆ ನಲುಗಬೇಕಾಗುತ್ತದೆ ಎಚ್ಚರಿಸಿದರು.

ಪ್ರತಿಭಟನಾ ಮೆರವಣಿಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಆರಂಭಗೊಂಡು ಎಂ.ಸಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ, ಡಾ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ