ಎಲ್ಲರನ್ನೂ ಸಮಾನತೆಯಿಂದ ಕಾಣುವುದು ಲಿಂಗಾಯತ ಧರ್ಮದ ಮೂಲತತ್ವ, ಬಸವಾದಿಶರಣರು ಸ್ನೇಹಬಾಳ್ವೆಯನ್ನು ಪ್ರತಿಪಾದಿಸಿದ್ದರು, ಇಂದಿನ ಜಗತ್ತಿಗೆ ಸಹಬಾಳ್ವೆ ಅಗತ್ಯವಾಗಿದೆ ಎಂದು ಕುಂಬಳಗೂಡು ಶ್ರೀ ಚನ್ನಬಸವಾನಂದ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ಶ್ರೀಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ಕಾಯಕಯೋಗಿ ಫೌಂಡೇಶನ್, ಲಿಂಗಾಯತ ಮಹಾಸಭಾ ಟ್ರಸ್ಟ್, ಬಸವ ಕೇಂದ್ರದ ಸಹಯೋಗದೊಂದಿಗೆ ನಡೆದ ‘ಶರಣರ ಚಿಂತನ ಮಂಥನ’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮೂಢನಂಬಿಕೆ, ದುಶ್ಚಟಗಳಿಂದ ಎಲ್ಲರೂ ದೂರ ಇರಬೇಕು, ಇದರಲ್ಲಿ ಯಾವುದೇ ಶಕ್ತಿ ಇಲ್ಲ, ಬಸವಣ್ಣನವರ ವಚನದಂತೆ ದಯವಿಲ್ಲದ ಧರ್ಮ ಅದ್ಯಾವುದಯ್ಯ ಎಂಬ ಜ್ಞಾನವನ್ನು ಪ್ರತಿಯೊಬ್ಬರು ಅರಿತಿರಬೇಕು. ಬಸವಣ್ಣ ಲಿಂಗಾಯತ ಧರ್ಮಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ವರ್ಗದವರಿಗೂ ಸಹ, ಬಸವಣ್ಣನವರ ಬಗ್ಗೆ ಭಕ್ತಿ ,ಪ್ರೀತಿ ಇದೆ ಎಂದರು.

ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಅವರು, ಬಸವಾದಿ ಶರಣರ ವಿಚಾರಗಳನ್ನು ಮನಗೊಂಡಿದ್ದರು, 12ನೇ ಶತಮಾನ ಅಂದರೆ ತಳ ಸಮುದಾಯಕೆ, ಜಾತಿ ವರ್ಗ ರಹಿತವಾದ ಸಮಾಜ ನಿರ್ಮಾಣವಾದ ಕಾಲ ವಿಶ್ವಗುರು ಬಸವಣ್ಣ ಬಸವಾದಿ ಶರಣ ವಿಚಾರಗಳನ್ನು ಆದರ್ಶಗಳನ್ನ ಈಗಿನ ರಾಜಕಾರಣಿಗಳು ಚಿಂತಕರು ಸಮಾಜ ಸುಧಾರಕರು, ಸಮಾಜ ಸೇವಕರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಎಲ್ಲಾ ಗ್ರಾಮಗಳಲ್ಲೂ ಪ್ರಮುಖವಾದ ಸ್ಥಳಗಳಲ್ಲಿ, ನಗರ ಪ್ರದೇಶಗಳಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಬೇಕು, ಇವರ ಆದರ್ಶ ವಿಚಾರಗಳನ್ನು ಎಲ್ಲಾ ಭಾಷೆಗಳಲ್ಲಿ ತಿಳಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕಾಗಿದೆ, ಬಸವಾದಿ ಶರಣರ ವಿಚಾರಗಳು ಇದ್ದ ಕಡೆ ಶಾಂತಿ ನೆಲೆಸುತ್ತದೆ, ಸ್ಥಳೀಯ ಮಠಮಾನ್ಯಗಳು ಸಂಘಟನೆಗಳು ಸ್ಥಳೀಯ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಅಲ್ಲಲ್ಲಿ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ ಶಿವಕುಮಾರ್ ಮಾತನಾಡಿ, ಲಿಂಗದಲ್ಲಿ ಅಗ್ನಿ ತತ್ವ ಇದೆ, ಲಿಂಗಧಾರಿಯಾದವರನ್ನು ಮುಟ್ಟಿಸಿಕೊಂಡರೆ, ಅವರು ಪಾವನರಾಗುತ್ತಾರೆ, ಪಾವನ ಮಾಡಿದ, ಪುಣ್ಯ ಲಿಂಗಧಾರಿ ಆದವರಿಗೆ ಲಭಿಸುತ್ತದೆ, ಆದ್ದರಿಂದ ಶಾಲಾ ಕಾಲೇಜು ಮಕ್ಕಳು, ಕಾರ್ಮಿಕರು ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ರೈತರು, ಕೂಲಿ ಕಾರ್ಮಿಕರು, ಯಾರೇ ಆಗಿರಲಿ ತಮ್ಮ ಕೊರಳಲ್ಲಿ ಇಷ್ಟಲಿಂಗ ವಿರಲಿ, ಹಣೆಯಲ್ಲಿ ವಿಭೂತಿ ಇರಲಿ ವಚನ ಸಾಹಿತ್ಯವನ್ನು ಎಲ್ಲರೂ ಅರಿತಿರಬೇಕು ಎಂದರು.
ಬೊಮ್ಮನಹಳ್ಳಿ ಪಟ್ಟದ ಮಠದ ಶ್ರೀ ಪ್ರಭುಲಿಂಗ ಸ್ವಾಮಿಗಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ ಬೆಟ್ಟಹಳ್ಳಿ ಎಂ ಎಸ್ ಮಂಜುನಾಥ್, ಶರಣೆ ಅರ್ಪಣಾ ಶಿವಕುಮಾರ್, ಗ್ರಾಮದ ಬಸವ ಸ್ಪೂರ್ತಿ ಸಂಘಟನೆ ಪ್ರಸಾದ್, ಶಿಕ್ಷಕ ಮಲ್ಲೇಶಪ್ಪ, ಚಂದ್ರಪ್ಪ, ಮಿಲ್ಟ್ರಿ ಸುರೇಶ್ ರಮೇಶ್, ನಾಗೇಂದ್ರ ರಾಜಣ್ಣ, ಪುಟ್ಟು ಬುದ್ಧಿ, ಶಿವಕುಮಾರ್, ನಾಗೇಂದ್ರ, ಚಂದ್ರಪ್ಪ ಮಹದೇವಸ್ವಾಮಿ ಸೇರಿದಂತೆ ಶರಣರು ಭಾಗವಹಿಸಿದ್ದರು.




