Friday, November 20, 2026

ಪ್ರಾಯೋಗಿಕ ಆವೃತ್ತಿ

8ನೇ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ: ದಸಂಸ ಪ್ರತಿಭಟನೆ, ವಕೀಲರ ಬೆಂಬಲ

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ವಿವಿಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಂಡ್ಯ ಜಿಲ್ಲಾ ವಕೀಲರ ಸಂಘ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಂಡವು.

ಮಂಡ್ಯ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ವಕೀಲರು ಮೆರವಣಿಗೆ ಮೂಲಕ ಆಗಮಿಸಿ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶವಯಾತ್ರೆ ನಡೆಸಿ ಪ್ರತಿಭಟಿಸಿ, ಜಿಲ್ಲಾ ರೈತ ರಕ್ಷಣಾ ಸಮಿತಿಯ ಧರಣಿಯಲ್ಲಿ ಪಾಲ್ಗೊಂಡರು.

ದಸಂಸ ಕಾರ್ಯಕರ್ತರು-ಪೊಲೀಸರ ಜಟಾಪಟಿ

ಕಾವೇರಿ ಅನ್ಯಾಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಶವಯಾತ್ರೆ ನಡೆಸಿದ ವೇಳೆ ಶವದ ಪ್ರತಿಕೃತಿಯನ್ನು ಪೊಲೀಸರು ಹೊತ್ತೊಯ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.

ಮಂಡ್ಯ ನಗರದ ಸಂಜಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ನಡೆಸಿದ ಸಮಿತಿ ಕಾರ್ಯಕರ್ತರು ಧರಣಿ ನಿರತರಾಗಿದ್ದ ವೇಳೆ ಶವದ ಪ್ರತಿಕೃತಿಯನ್ನು ಪೊಲೀಸರು ಹೊತ್ತೊಯ್ದು ಬಚ್ಚಿಟ್ಟರು. ವಿಷಯ ತಿಳಿದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಜೊತೆ ಕಾರ್ಯಕರ್ತರು ಪೊಲೀಸರ ಬೆನ್ನಟ್ಟಿದರು, ಪೊಲೀಸರು ಮತ್ತು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯಿಂದ ಶಾಸಕರ ಕಚೇರಿಯತ್ತ ದೌಡಾಯಿಸಿದರು. ಪ್ರತಿಕೃತಿಯ ಹುಲ್ಲು ಮತ್ತು ಬೊಂಬುಗಳು ಪ್ರತಿಭಟನಾಕಾರರ ಕೈಗೆ ಸಿಕ್ಕಿದವು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲಿ ಪ್ರತಿಕೃತಿಯ ಹುಲ್ಲು ಮತ್ತು ಬೊಂಬು ದಹಿಸಲು ಮುಂದಾದಾಗ ಪೊಲೀಸರು ತಡೆದು ಗೇಟಿನ ಹೊರಕ್ಕೆ ಕಳುಹಿಸಿದರು. ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿ ಗೇಟಿನ ಬಳಿ ದಹನಕ್ಕೆ ಮುಂದಾದರು, ಈ ವೇಳೆಯೂ ತಡೆಯಲು ಮುಂದಾದ ಪೊಲೀಸರ ಭದ್ರಕೋಟೆ ಭೇದಿಸಿ ಬೆಂಕಿ ಹಚ್ಚಿದರು.

ಡಿ ವೈ ಎಸ್ ಪಿ ಶಿವಮೂರ್ತಿ ಮತ್ತು ಪೊಲೀಸ್ ಅಧಿಕಾರಿಗಳು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸ ಪಟ್ಟರು, ಆದರೆ ಪ್ರತಿಭಟನಾಕಾರರು ಸುತ್ತುವರೆದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ, ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರಕ್ಕೆ ತೆರಳಿ ಪೊಲೀಸರ ದೌರ್ಜನ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಹಿತರಕ್ಷಣಾ ಸಮಿತಿಯ ಹೋರಾಟದಲ್ಲಿ ಸುನಂದಾ ಜಯರಾಂ, ಮಾಜಿ ಶಾಸಕ ಕೆ. ಟಿ. ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಎಂ.ವಿ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ