ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಕಸ್ಮಿಕ ಬೆಂಕಿಗೆ ಕಾರೊಂದು ಧಗಧಗಿಸಿ ಸುಟ್ಟು ಭಸ್ಮವಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ರಾಜಸ್ಥಾನ ಮೂಲದ ವಿಕ್ರಮ್ ತನ್ನ ಗೆಳೆಯರೊಂದಿಗೆ ರೆನಾಲ್ಟ್ ಕಂಪನಿಯ ರೆನಾಲ್ಟ್ ಲಾಡ್ಜಿ ಕಾರಿನಲ್ಲಿ (TN-12 W-8463) ವ್ಯಾಪಾರದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುತ್ತಿದ್ದರು.
ಗಣಂಗೂರು ಬಳಿ ತೆರಳುತ್ತಿದ್ದಾಗ ಇಂಜಿನ್ ನಲ್ಲಿ ಹೊಗೆ ಕಾಣಿಸಿ ಕೊಂಡಿದ್ದು,ಗೌಡಹಳ್ಳಿ ಗೇಟ್ ಬಳಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ಮೂವರು ಕೆಳಗೆ ಇಳಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಕಾರಿನಲ್ಲಿದ್ದ ಎಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು,ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು,ಈ ಬಗ್ಗೆ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




