Wednesday, November 18, 2026

ಪ್ರಾಯೋಗಿಕ ಆವೃತ್ತಿ

ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸಿಕೊಂಡು ವಂಚಿಸಿದ ಖದೀಮರು !

ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸಿಕೊಂಡು ವಂಚಿಸಿರುವ 2 ಪ್ರತ್ಯೇಕ ಘಟನೆಗಳು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ವರದಿಯಾಗಿವೆ.
ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಗಣೇಶ್ ಅವರ ಪತ್ನಿ ರಾಧಾ ಅವರಿಗೆ ಸೇರಿದ 33 ಗ್ರಾಂ ತೂಕದ ಚಿನ್ನದ ಸರವನ್ನು ಪಾಲಿಶ್ ಮಾಡುವ ನೆಪದಲ್ಲಿ, ಸುಮಾರು 5 ಗ್ರಾಂ ನಷ್ಟು ಚಿನ್ನವನ್ನು ಕರಿಸಿಕೊಂಡು ಇಬ್ಬರು ವಂಚಕರು ಪರಾರಿಯಾಗಿದ್ದಾರೆ. ಕಳೆದು ಕೊಂಡ ಚಿನ್ನದ ಬೆಲೆ ಸುಮಾರು ₹30 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಘಟನೆ ನಡೆದ ನಾಲ್ಕು ದಿನಗಳ ನಂತರ ಅದೇ ಬಲ್ಲೇನಹಳ್ಳಿ ಗ್ರಾಮಕ್ಕೆ ಬಂದ ವಂಚಕರು, ನಿಂಗರಾಜು ಎಂಬುವವರ ಪತ್ನಿಗೆ ಸೇರಿದ ಚಿನ್ನದ ಸರವನ್ನು ಅದೇ ರೀತಿ ಪಾಲಿಶ್ ಮಾಡುವುದಾಗಿ ಹೇಳಿ, 40ಗ್ರಾಂ ಚಿನ್ನದ ಸರದಿಂದ 8 ಗ್ರಾಂ ಚಿನ್ನವನ್ನು ಕರಗಿಸಿಕೊಂಡು ವಾಪಸ್ ನೀಡಲು ಮುಂದಾದರು, ಈ ಸಮಯದಲ್ಲಿ ಅನುಮಾನಗೊಂಡ ನಿಂಗರಾಜು ಅವರ ಪತ್ನಿ, ಚಿನ್ನದ ಸರವನ್ನು ಕೈಯಲ್ಲಿಡಿದು ನೋಡಿದಾಗ, ಸರದ ತೂಕ ಕಡಿಮೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕೂಡಲೇ ಆರೋಪಿಯನ್ನು ಹಿಡಿದು ಮನೆಯಲ್ಲಿ ಕೂಡಿ ಹಾಕಿದರು.
ನಂತರ ಬೂಕನಕೆರೆ ಗ್ರಾಮದ ಚಿನ್ನದ ಅಂಗಡಿಗೆ ತೆರಳಿ ಚಿನ್ನದ ಸರವನ್ನು ತೂಕ ಹಾಕಿಸಿದಾಗ 8 ಗ್ರಾಂ ಚಿನ್ನ ಕಡಿಮೆಯಾಗಿರುವುದು ಕಂಡು ಬಂದಿತು. ತಕ್ಷಣ ವಾಪಸ್ ಬಂದು ಸಾರ್ವಜನಿಕರಿಗೆ ತಿಳಿಸಿ ಆರೋಪಿಗೆ ಧರ್ಮದೇಟು ನೀಡಿ, ಆರೋಪಿಯಿಂದ ಪೋನ್ ಪೇ ಮೂಲಕ  40ಸಾವಿರ ಹಣ ವಸೂಲಿ‌ ಮಾಡಿದ್ದರು. ಆದರೆ ಹಣವನ್ನು ಪಾವತಿ ಮಾಡಿರುವ ಅಪರಿಚಿತ ಆರೋಪಿ ಈಗ ಗ್ರಾಮದಿಂದ ಪರಾರಿಯಾಗಿದ್ದಾನೆ.
ಆದರೆ ಇದಕ್ಕೂ ಮೊದಲೇ ವಂಚನೆಗೆ ಒಳಗಾದ ರಾಧಾಗಣೇಶ್ ಕೆ ಆರ್ ಪೇಟೆ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗ್ರಾಮಾಂತರ ಪೊಲೀಸ್  ಠಾಣೆಯ  ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ  ಮಹಜರು ನಡೆಸಿ, ಆರೋಪಿಯ ಚಹರೆಯ ಬಗ್ಗೆ ಮಾಹಿತಿ  ಪಡೆದುಕೊಂಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಕದ್ದಿರುವ ಚಿನ್ನವನ್ನು ವಾಪಸ್ ಕೊಡಿಸುವ  ಭರವಸೆ ನೀಡಿದ್ದಾರೆ.
ಚಿನ್ನ ಪಾಲಿಶ್ ಮಾಡುವುದಾಗಿ ಬರುವ ಅಪರಿಚಿತರ ಬಗ್ಗೆ ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕೆಂದು ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುಬ್ಬಯ್ಯ ಸಾರ್ವಜನಿಕರಲ್ಲಿ  ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ