Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೇ 26ಕ್ಕೆ ”ಏದ್ದೇಳು ಕರ್ನಾಟಕ” ರಾಜ್ಯಮಟ್ಟದ ಅಭಿನಂದನಾ ಸಮಾವೇಶ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾದ 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ಸಂಘಟನೆಯ ರಾಜ್ಯಮಟ್ಟದ ಅಭಿನಂದನಾ ಸಮಾರಂಭವನ್ನು ಬೆಂಗಳೂರಿನ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಮೇ 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿ ಪರ ವಕೀಲ ಬಿ.ಟಿ.ವಿಶ್ವನಾಥ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಡರಿಯದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ದ್ವೇಷ ರಾಜಕಾರಣಕ್ಕೆ ಕುಖ್ಯಾತಿ ಪಡೆದಿದ್ದ ಬಿಜೆಪಿ ಸೋತು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ವಿಜಯ ಕಾಂಗ್ರೆಸ್ ಪಕ್ಷದ ವಿಜಯ ಮಾತ್ರವಾಗಿರದೆ ಇಡೀ ನಾಡಿನ ಜನತೆಯ ವಿಜಯವಾಗಿದೆ. ಈ ಜನವಿರೋಧಿ ಆಡಳಿತವನ್ನು ಅಂತ್ಯಗೊಳಿಸಬೇಕೆಂದು ನಾಡಿನ ಎಲ್ಲ ಪ್ರಗತಿಪರ ಸಂಘಟನೆಗಳು,
ಮಹಿಳಾ ಸಂಘಟನೆಗಳು, ತಳ ಸಮುದಾಯಗಳು, ಅಲ್ಪಸಂಖ್ಯಾತ-ದಲಿತ-ಆದಿವಾಸಿ-ಹಿಂದುಳಿದ ಜನ ಸಮುದಾಯಗಳ ಸಂಘ ಸಂಸ್ಥೆಗಳು ಅಪಾರ ಶ್ರಮವಹಿಸಿ ಕೆಲಸ ಮಾಡಿವೆ. ಈ ಪೈಕಿ ‘ಎದ್ದೇಳು ಕರ್ನಾಟಕ’ ಎಂಬ ಹೆಸರಿನಲ್ಲಿ ನಡೆದ ನಾಗರಿಕ ಸಮಾಜದ ಸಂಘಟಿತ ಪ್ರಯತ್ನ ವಿಶೇಷ ಪರಿಣಾಮವನ್ನು ಬೀರಿದೆ ಎಂದು ವಿವರಿಸಿದರು.

nudikarnataka.com

112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆ
ಈ ಬಾರಿಯ ಚುನಾವಣೆಯಲ್ಲಿ 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ
ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ತಳ ಸಮುದಾಯಗಳನ್ನು ಜಾಗೃತಗೊಳಿಸುವುದರಲ್ಲಿ ವಿಶೇಷ ಪಾತ್ರ
ನಿರ್ವಹಿಸಿತು. ಒಟ್ಟು 103 ಕ್ಷೇತ್ರಗಳನ್ನು ಸೂಕ್ಷ್ಮ (ಕ್ರಿಟಿಕಲ್) ಎಂದು ಗುರುತಿಸಿ, ಅದರಲ್ಲಿ ಜಾತ್ಯಾತೀತ ಸಮುದಾಯಗಳ ಮತದಾನದ ಪ್ರಮಾಣವನ್ನು ಹೆಚ್ಚಿಸಲು, ಮತ ವಿಭಜನೆಯಾಗದಂತೆ ತಡೆಯಲು ವಿಶೇಷ ಪ್ರಯತ್ನ ಹಾಕಿ ಕೆಲಸ ಮಾಡಲಾಯಿತು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿ ಯಾರೆಂದು ಗುರುತಿಸಿ ಅವರಿಗೆ ಮಾತ್ರವೇ ಮತ ಹಾಕಿ ಎಂಬ ಕಾರ್ಯ ನೀತಿಯು ಬಿಜೆಪಿಯ ಸೋಲಿನಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು ಎಂದರು.

250ಕ್ಕೂ ಹೆಚ್ಚು ಕಾರ್ಯಾಗಾರ
ವಿಚಾರವಾದಿ ಪ್ರೊ.ಹುಲ್ಲಕೆರೆ ಮಹದೇವು ಮಾನತಾಡಿ, ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ ಸ್ವಯಂಸೇವಕರನ್ನು
ಸಿದ್ಧಗೊಳಿಸಲಾಯಿತು. ರಾಜ್ಯವ್ಯಾಪಿ ಅನೇಕ ಸಂಘ-ಸಂಸ್ಥೆಗಳ ಸಹಸ್ರಾರು ಸದಸ್ಯರು ಸ್ವಯಂಸೇವಕರಾಗಿ ‘ಎದ್ದೇಳು ಕರ್ನಾಟಕ’ ಅಭಿಯಾನದಲ್ಲಿ ತೊಡಗಿಸಿಕೊಂಡರು. 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿವಿಧ ಸಾಹಿತ್ಯವನ್ನು ಮುದ್ರಿಸಿ ಹಂಚಲಾಯಿತು. ಸೋಷಿಯಲ್ ಮೀಡಿಯಾ  ಪ್ರಚಾರವನ್ನು ಅವ್ಯಾಹತವಾಗಿ ನಡೆಸಲಾಯಿತು ಎಂದರು.

ವಿವಿಧ ಭಾಷೆಗಳಲ್ಲಿ 1000ಕ್ಕೂ ಹೆಚ್ಚು ಬಗೆಯ ಸೋಷಿಯಲ್ ಮೀಡಿಯಾ ಪೋಸ್ಟರುಗಳನ್ನು, 80ಕ್ಕೂ ಹೆಚ್ಚು ವಿಡಿಯೋಗಳನ್ನು, 7 ಹಾಡಿನ ಆಲ್ಬಂಗಳನ್ನು ಹೊರತರಲಾಯಿತು. ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳ ದೊಡ್ಡ ಜಾಲ ಪರಸ್ಪರ ಹೆಗಲುಕೊಟ್ಟು ಕೆಲಸ ಮಾಡಿತು. ರಾಜ್ಯದ ಬಹುತೇಕ ಜನಮುಖಿ ಸಾಹಿತಿ, ಚಿಂತಕರು, ಕಲಾವಿದರು ಈ ಅಭಿಯಾನಕ್ಕೆ ಒತ್ತಾಸೆಯಾಗಿ  ದುಡಿದರು. ವಿವಿಧ ರಾಜ್ಯಗಳ ಹೋರಾಟಗಾರರೂ ಬಂದು ಈ ಅಭಿಯಾನದಲ್ಲಿ ನಿಸ್ವಾರ್ಥವಾಗಿ ತೊಡಿಗಿಸಿಕೊಂಡರು ಎಂದು ನುಡಿದರು.

ಅಂತೂ ಜನರಲ್ಲಿ ಮಡುಗಟ್ಟಿದ್ದ ಅಸಮಾಧಾನ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿಗಳು ಹಾಗೂ
ಸಾಮಾಜಿಕ ಚಳವಳಿಗಳು ರೂಪಿಸಿದ ಜನಜಾಗೃತಿ ಎಲ್ಲವೂ ಸೇರಿ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಿದೆ.
ಸಂವಿಧಾನ ವಿರೋಧಿ ಶಕ್ತಿಗಳಿಂದ ನಾಡನ್ನು ರಕ್ಷಿಸಲು ದುಡಿದ ಕೈಗಳನ್ನು ಗೌರವಿಸುವ, ಅಭಿನಂದಿಸುವ
ಅಗತ್ಯವಿದೆ. ಈ ಕಾರಣಕ್ಕಾಗಿಯೇ ‘ಎದ್ದೇಳು ಕರ್ನಾಟಕ’ದ ವತಿಯಿಂದ ‘ಅಭಿನಂದನಾ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಖರ್ಗೆ, ಸಿಎಂ, ಡಿಸಿಎಂಗೆ ಆಹ್ವಾನ 
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, ನಮಗೆಲ್ಲರಿಗೂ
ಮಾರ್ಗದರ್ಶಿಯಾಗಿದ್ದ ಸ್ವಾತಂತ್ರ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರು ನಮಗೆ ಜವಾಬ್ದಾರಿಯನ್ನಿತ್ತು ನಮ್ಮನ್ನಗಲಿ, ಮೇ 26ಕ್ಕೆ ಎರಡು ವರುಷಗಳಾಗುತ್ತಿದೆ, ಇದರ ನೆನೆಪಿಗಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ಒಳಗೊಂಡಂತೆ ಕಾಂಗ್ರೆಸ್ ಪಕ್ಷದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ, ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಜನ ಚಳವಳಿಯ ಏಕೈಕ ಪ್ರತಿನಿಧಿಯಾಗಿ ಮೇಲುಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರನ್ನೂ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ನಾಡಿನ ವಿವಿಧ ಭಾಗಗಳಲ್ಲಿ, ನಾನಾ ರೀತಿಗಳಲ್ಲಿ ತೊಡಗಿಸಿಕೊಂಡು ದುಡಿದ ಸ್ವಯಂಸೇವಕರ ಸಮಾಗಮ, ಬಹುತ್ವ ಮೌಲ್ಯಗಳ ಸಂಭ್ರಮ, ಹಿರಿಯ ಚೇತನ ದೊರೆಸ್ವಾಮಿಯವರಿಗೆ ಶ್ರದ್ದಾಂಜಲಿ ಮತ್ತು ಜನಸಾಮಾನ್ಯರ ನಿರೀಕ್ಷೆಗಳ ಕಡೆ ಸರ್ಕಾರದ ಗಮನ ಸೆಳೆಯುವುದು ಈ ಅಭಿನಂದನಾ ಸಮಾವೇಶದ ಮುಖ್ಯ ಉದ್ದೇಶಗಳಾಗಿವೆ. ಆದ್ದರಿಂದ ಈ ಅಭಿನಂದನಾ ಸಮಾವೇಶದಲ್ಲಿ ನಾಡಪ್ರೇಮಿಗಳು ತಪ್ಪದೇ ಭಾಗವಹಿಸಬೇಕೆಂದು ಮನವಿ ಮಾಡಿದರು.

ಗೋ‍ಷ್ಠಿಯಲ್ಲಿ ಮಹಿಳಾ ಮುನ್ನಡೆಯ ಸೌಮ್ಯ, ಅರುಣೋದಯ ಕಲಾತಂಡದ ಮಂಜುಳ, ಮುಖಂಡರಾದ ವೈದುನ, ಚಂದ್ರಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!