ಅಧೋಗತಿಯಲ್ಲಿ ಸಾಗುತ್ತಿರುವ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸದುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾ ದರ್ಶನವನ್ನು ಜಾರಿಗೊಳಿಸಿದ್ದಾರೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಭದ್ರರ ಆಟಾಟೋಪದಿಂದ ತಾಲ್ಲೂಕಿನಲ್ಲಿ ಭೂ ಮಾಫಿಯಾ ಎಗ್ಗಿಲ್ಲದೇ ವಿಜೃಂಭಿಸುತ್ತಿದೆ.ಸರ್ಕಾರಿ ಕಚೇರಿಗಳಲ್ಲಿ ಏಜೆಂಟ್‌ರ್‌ಗಳ ಹಾವಳಿ ಹೆಚ್ಚಳವಾಗಿದೆ. ಇವುಗಳನ್ನು ನಿಯಂತ್ರಿಸಿ ಜನಸಾಮಾನ್ಯರಿಗೆ ವಿವಿಧ ಯೋಜನೆಗಳ ಫಲ ದೊರೆಯುವಂತೆ ಮಾಡುವ ಸದುದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ನಡೆಯಲಿದ್ದು, ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಬವಣೆ ಆರಂಭವಾಗಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳ ರಕ್ಷಣೆ ನಮ್ಮ ಆಡಳಿತದ ಗುರಿಯಾಗಿದ್ದು, ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹಿಸಲಾಗುವುದು. ಶಾಲೆಗಳ ಬಲವರ್ಧನೆ, ಬಡವರ ಕಲ್ಯಾಣಗಳತ್ತ ಗಮನ ಹರಿಸುವುದು ನಮ್ಮ ಆಡಳಿತದ ಗುರಿ ಎಂದು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ, ದಂದೆಗಳನ್ನು ಮಟ್ಟಹಾಕಿ, ಪಟ್ಟಭದ್ರರ ಪಾಲಾಗಿರುವ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯುವುದು ಎಲ್ಲಾ ಜಾತಿ, ಧರ್ಮದ ಜನರಿಗೆ ನ್ಯಾಯ ಕೊಡಿಸುವ ಚಿಂತನೆ ನನ್ನದಾಗಿದೆ ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿರುವ ನಮಗೆ ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಯಿಂದ ಬೇಸರವಾಗಿದೆ.ಕಾವೇರಿ ನಮ್ಮೆಲ್ಲರ ಜೀವನಾಡಿಯಾಗಿದ್ದು, ನಮ್ಮ ಬದುಕೇ ಕಾವೇರಿಯಾಗಿದ್ದು, ಎತ್ತಿಕಟ್ಟುವ ರಾಜಕೀಯ ವ್ಯವಸ್ಥೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಜೊತೆಗೂಡಿ ನರೇಂದ್ರ ಸ್ವಾಮಿ ಸಾಂಕೇತಿಕವಾಗಿ ಮಂಜೂರಾತಿ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಸಿ ಜಾಫರ್, ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ ಸಿಇಓ ಶೇಕ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಉಪ ವಿಭಾಗಾಧಿಕಾರಿ ಎಂ. ಶಿವಮೂರ್ತಿ, ತಹಶೀಲ್ದಾರ್ ಕೆ.ಎನ್ ಲೊಕೇಶ್, ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್. ಮಮತ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




