ಮಂಡ್ಯ : ಎಚ್.ಡಿ ಚೌಡಯ್ಯನವರು ಸಾರ್ವಜನಿಕ ಬದುಕಿನಲ್ಲಿ ಅತ್ಯಮೂಲ್ಯವಾಗಿರಬೇಕಾದ ಪ್ರಾಮಾಣಿಕತೆ, ನಿಷ್ಪೃಹತೆ, ಆಧರಿಸುವಿಕೆ ಹಾಗೂ ತನಗೆ ಏನು ಬೇಕು ಎನ್ನುವುದನ್ನು ಅರ್ಥ ಮಾಡಿ ಕೊಂಡಿದ್ದ ದೊಡ್ಡ ಮಾಣಿಕ್ಯ ಎಚ್.ಡಿ. ಚೌಡಯ್ಯನವರು ನಶಿಸಿ ಹೋದ ರಾಜಕೀಯ ಪರಂಪರೆಯ ಕೊನೆಯ ಕೊಂಡಿ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ. ಬಿ. ಆರ್. ರವಿಕಾಂತೇ ಗೌಡ ಬಣ್ಣಿಸಿದರು.
ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಇಂದು ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್ ಮೆಂಟ್ ಸಭಾಂಗಣದಲ್ಲಿ ನಡೆದ ಡಾ. ಹೆಚ್. ಡಿ. ಚೌಡಯ್ಯನವರ 99ನೇ ಜನ್ಮದಿನಾಚರಣೆ ಹಾಗೂ 2026ನೇ ಸಾಲಿನ ರಾಜ್ಯಮಟ್ಟದ ಹೆಚ್.ಡಿ. ಚೌಡಯ್ಯ ಸಮಾಜಸೇವೆ, ಕ್ರೀಡೆ ಮತ್ತು ಕೃಷಿ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚೌಡಯ್ಯ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ.ಅವರ ಜೊತೆ ಎರಡು ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದೇನೆ. ಅವರ ಬಗ್ಗೆ ಸಾಕಷ್ಟು ಓದಿದ್ದೇನೆ ಜನರು ಕೂಡ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಆದರೆ ನಾನು ಅವರ ಹತ್ತಿರವಿದ್ದು ಬಲ್ಲವನಲ್ಲ.ಬಹುಶಃ ಅವರ ಬಗ್ಗೆ ಇದ್ದ ಭಯ ಮತ್ತು ಸಂಕೋಚ ಕಾರಣದಿಂದಲೇ ಅವರ ಹತ್ತಿರ ಹೋಗುವುದಕ್ಕೆ ಸಾಧ್ಯವಾಗಲಿಲ್ಲ ಎನಿಸುತ್ತದೆ. ಆ ಕಾಲದ ಪ್ರಾಮಾಣಿಕ ರಾಜಕಾರಣಿಗಳಾದ ಕೆ.ವಿ.ಶಂಕರಗೌಡ, ಸಾಹುಕಾರ್ ಚನ್ನಯ್ಯ ಅವರಂತೆ ಎಚ್. ಡಿ. ಚೌಡಯ್ಯನವರು ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃಷಿ ಪದವೀಧರರಾಗಿದ್ದ ಅವರು ಮನಸ್ಸು ಮಾಡಿದ್ದರೆ ದೊಡ್ಡ ಅಧಿಕಾರಿ ಆಗಬಹುದಿತ್ತು. ಆದರೆ ಕೃಷಿಯನ್ನು ನಂಬಿರುವ ಜನರಿಗಾಗಿ ಏನಾದರೂ ಮಾಡಬೇಕು ಎಂಬಂತೆ, ಗಾಂಧೀಜಿಯವರ ಮರಳಿ ಮಣ್ಣಿಗೆ ಸಿದ್ಧಾಂತದಂತೆ ಅವರು ತಮ್ಮ ಬದುಕನ್ನು ಗ್ರಾಮೀಣ ಜನರಿಗಾಗಿ ಸಮರ್ಪಿಸಿ ಕೊಂಡಿದ್ದರು ಎಂದರು.
ತಮ್ಮ ರಾಜಕೀಯ ಗುರು ಕೆ.ವಿ. ಶಂಕರಗೌಡರ ಜೊತೆ ಸಹಕಾರ ಚಳುವಳಿಯಲ್ಲಿ ಗುರುತಿಸಿಕೊಂಡ ಚೌಡಯ್ಯನವರಿಗೆ ಗುರು ಶಂಕರಗೌಡರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಇತ್ತು. ಆದರೆ ಅವರೆಂದು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಅವರ ವಿರುದ್ಧ ಮಾತನಾಡಲಿಲ್ಲ.ಕೆ. ವಿ. ಶಂಕರಗೌಡ ಹಾಗೂ ಚೌಡಯ್ಯನವರಿಗೆ ಪರಸ್ಪರ ಗೌರವವಿತ್ತು. ಐದು ಬಾರಿ ಶಾಸಕರಾಗಿದ್ದರೂ ಸಹ ಅವರು ಸಚಿವರಾಗಲಿಲ್ಲ. ಇಂದಿನ ರಾಜಕಾರಣಿಗಳಿಗಿರುವ ಮನೋಭಾವ ಇದ್ದಿದ್ದರೆ ಸಚಿವರಾಗುತ್ತಿದ್ದರು. ಆದರೆ ಅವರೆಂದೂ ಅಧಿಕಾರದ ಹಿಂದೆ ಹೋಗಲಿಲ್ಲ. ಸಹಕಾರ ಚಳುವಳಿ, ಡಿಸಿಸಿ ಬ್ಯಾಂಕ್, ಶಾಸಕರಾಗಲು ಕಾಂಗ್ರೆಸ್ ಪಕ್ಷವೇ ಅವರಿಗೆ ಟಿಕೆಟ್ ನೀಡಿತು. ಇವೆಲ್ಲವೂ ಅವರನ್ನು ಹುಡುಕಿಕೊಂಡು ಬಂದವೇ ಹೊರತು ಅವರಾಗೇ ಎಂದೂ ಹೋಗಿ ಕೊಡಿ ಎಂದಿರಲಿಲ್ಲ ಎಂದು ಗುಣಗಾನ ಮಾಡಿದರು.
ಚೌಡಯ್ಯನವರ ಸಮಯಪಾಲನೆ ಬಗ್ಗೆ ದಂತಕಥೆಗಳಿವೆ.ಸದಾ ಬಿಳಿ ವಸ್ತ್ರಧಾರಿಯಾಗಿದ್ದ ಅವರು ಕಚೇರಿಗೆ ಬಂದು ಕೆಲಸ ಮಾಡುವುದಾಗಲಿ, ಯಾವುದೇ ಸಭೆ- ಸಮಾರಂಭಗಳಿಗೆ 15 ನಿಮಿಷ ಮುಂಚಿತವಾಗಿಯೇ ಹೋಗುವ ಮೂಲಕ ಸಮಯ ಪಾಲನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಆಡಳಿತದಲ್ಲೂ ಬಿಗಿಯಾದ ಹಿಡಿತ ಹೊಂದಿದ್ದ ಅವರು ತಮ್ಮ ಸಂಸ್ಥೆಯಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದರು.ಸಾರ್ವಜನಿಕರ ಹಾಗೂ ಸಂಸ್ಥೆಯ ಕೆಲಸವನ್ನು ತಮ್ಮ ಮನೆ ಕೆಲಸಗಳಿಂದ ಹೆಚ್ಚಾಗಿ ಮಾಡುವ ಮೂಲಕ ಕೆ.ವಿ. ಶಂಕರಗೌಡರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಜನರ ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸುಸಜ್ಜಿತವಾದ ಕ್ರೀಡಾಂಗಣವನ್ನು ಸ್ಥಾಪನೆ ಮಾಡಿದರು.ಜನರ ಹಾಗೂ ನನ್ನ ಸಂಸ್ಥೆಯ ಕೆಲಸಕ್ಕೆ ಯಾರ ಮನೆ ಬಾಗಿಲು ಬೇಕಾದರೂ ಹೋಗಿ ಕಾಯುತ್ತೇನೆ. ಆದರೆ ವೈಯಕ್ತಿಕ ಕೆಲಸಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ ಎಂದು ಚೌಡಯ್ಯನವರು ಹೇಳುತ್ತಿದ್ದರು. ಅದರಂತೆ ಅವರು ನಡೆದುಕೊಂಡು ತುಂಬು ಜೀವನ ನಡೆಸಿ ಬಾಳಿ ಬದುಕಿ ಹೋಗಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಟ್ರಸ್ಟಿನ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ. ಎನ್. ಎಸ್. ರಾಮೇಗೌಡರಿಗೆ ಸಮಾಜಸೇವಾ ಪ್ರಶಸ್ತಿ,
ಕ್ರೀಡಾಪಟು ಶಿಲ್ಪಾರವರಿಗೆ ಕ್ರೀಡಾ ಪ್ರಶಸ್ತಿ, ವೆಂಕಟೇಶ್ ಪಾಲಹಳ್ಳಿರವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾಗೆಯೇ ಹೊಳಲು ಪ್ರೌಢಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಚೌಡಯ್ಯನವರ ಸುಪುತ್ರ ಮೋಹನ್ ಕುಮಾರ್, ಡಾ. ರಾಮಲಿಂಗಯ್ಯ ಸೇರಿದಂತೆ ಮತ್ತಿತರರಿದ್ದರು.




