ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಸ್ವಚ್ಛತೆಗೆ ಪ್ರಾಶಸ್ತ್ಯ ಕೊಟ್ಟವರು ಎಂದು ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ತಿಳಿಸಿದರು.
ಮಂಡ್ಯ ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ ಜಿಲ್ಲಾ ಶಾಖೆ ವತಿಯಿಂದ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154 ನೇ ಜನ್ಮ ದಿನಾಚರಣೆ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛತೆ ಎಲ್ಲರ ಕರ್ತವ್ಯ, ಅದನ್ನು ಎಲ್ಲರೂ ಸೇರಿ ಮಾಡಿದಾಗ ದೇಶ ಸ್ವಚ್ಚವಾಗಬಲ್ಲದು ಎಂದ ಅವರು ಸಮಾನತೆಯನ್ನು ದೇಶದಲ್ಲಿ ಸಾಧಿಸಲು ಕರೆ ಕೊಟ್ಟವರು ಎಂದು ಹೇಳಿದರು.
ದಿನನಿತ್ಯದ ಬದುಕಿನಲ್ಲಿ ಗಾಂಧಿಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ. ಹನುಮಂತು ಮಾತನಾಡಿ ಸತ್ಯ,ಅಹಿಂಸೆ, ಸರಳತೆ ಮೂಲಕ ವಿಶ್ವದ ಸಮಸ್ಯೆಯನ್ನು ಬಗೆಹರಿಸುವುದನ್ನು ಕೃತಿ ಮೂಲಕ ತೋರಿಸಿಕೊಟ್ಟವರು ಮಹಾತ್ಮ ಗಾಂಧೀಜಿ ಎಂದು ಬಣ್ಣಿಸಿದರು.
2007 ರಿಂದ ವಿಶ್ವ ಸಂಸ್ಥೆ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ವಿಶ್ವ ಅಹಿಂಸಾ ದಿನವೆಂದು ಆಚರಿಸಲಾಗುತ್ತಿದೆ. ವಿಶ್ವದ ಯಾವುದೇ ವಿಶ್ವ ವಿಶ್ವವಿದ್ಯಾನಿಲಯ ಗಳಲ್ಲಿ ಗಾಂಧೀಜಿ ಪ್ರತಿಮೆ, ಗಾಂಧೀಜಿ ಅಧ್ಯಯನ ಪೀಠ ಗಳಿವೆ ಆದ್ದರಿಂದ ಗಾಂಧೀಜಿ ಎಲ್ಲಾ ಕಾಲಕ್ಕೂ ಪ್ರಸ್ತುತ. ಗಾಂಧೀಜಿಯವರ ಉದಾತ್ತ ಚಿಂತನೆಗಳನ್ನು, ತತ್ವಗಳು, ಆದರ್ಶಗಳನ್ನು ಅಳವಡಿಸಿಕೊಂಡು ಯುವ ಪೀಳಿಗೆಗೆ ಗಾಂಧೀಜಿಯವರ ಚಿಂತನೆಗಳನ್ನು ತಿಳಿಸಿ ಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ರಮೇಶ್,ಈರಪ್ಪ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಶಾಲಾ ಮಕ್ಕಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




