Sunday, November 22, 2026

ಪ್ರಾಯೋಗಿಕ ಆವೃತ್ತಿ

ಉಬ್ಬುಬ್ಬಿ, ಹಬ್ಬಿ ಹರಿಯುತಿದೆ ನೆತ್ತರ ನದಿ

ಹರೀಶ್ ಗಂಗಾಧರ್

ಆಗಸವನ್ನ ಸೀಳಿ ನೂರಾರು ಬಿರುಸಿನಗಳು ಬಾಣ ತೂರಿ ಬರುತ್ತಿವೆ, ಹಬ್ಬದ ಸಡಗರದಲ್ಲಿದ್ದ ಜನಸಾಮಾನ್ಯರು ಚಲ್ಲಾಪಿಲ್ಲಿಯಾಗಿ ಓಡುತ್ತಿದ್ದಾರೆ. ಗಡಿಯ ಗೋಡೆಗಳು ಉರುಳಿವೆ, ಶಸ್ತ್ರಾಧಾರಿಗಳು ವಾಯು, ನೆಲ ಮತ್ತು ಜಲ ಮಾರ್ಗದಿ ದಾಳಿಯಿಟ್ಟಿದ್ದಾರೆ, ಒತ್ತೆಯಾಳುಗಳ ಸಂಖ್ಯೆ ತಿಳಿದಿಲ್ಲ, ಸತ್ತವರ ಸಂಖ್ಯೆ ಏರುತ್ತಲೇ ಇದೆ, ರಸ್ತೆಯ ಎರಡು ಬದಿಗಳಲ್ಲಿ ಸುಟ್ಟ ವಾಹನಗಳ ರಾಶಿ ರಾಶಿ, ಕೆಲ ಕ್ಷಿಪಣಿಗಳು ಚಾವಣಿಗಳನ್ನ ಬಗೆದು ಸ್ಪೋಟಗೊಳ್ಳದೆ ಅಲ್ಲೇ ಉಳಿದಿವೆ, ಎಲ್ಲೆಲ್ಲೂ ಜನರ ಚೀತ್ಕಾರ… ಇದೊಂದು ಅಂತ್ಯವಿರದ ಯುದ್ಧ. ಇಲ್ಲಿ ಗೆದ್ದವನು ಸೋಲುತ್ತಾನೆ, ಸೋತವನು ಸೋಲುತ್ತಾನೆ. ಕಂಬನಿ ನಿರಂತರ ಮತ್ತು ಶಾಶ್ವತ. ಭೂಮಿಯ ಮೇಲಿನ ಅತಿ ಉದ್ವಿಗ್ನ ಪ್ರಾಂತ್ಯವಾದ ಇಸ್ರೇಲ್ ಮತ್ತು ಪ್ಯಾಲೆಸ್ತೀನಲ್ಲಿ ಮತ್ತೊಮ್ಮೆ ಕದನದ ಕಹಳೆ ಮೊಳಗಿದೆ. ಈ ಬಾರಿ ಯುದ್ಧ ತನ್ನ ಸೀಮೆಯನ್ನ ಮೀರಿ ಇಡೀ ವಿಶ್ವಕ್ಕೆ ಆವರಿಸಿಕೊಂಡರೆ ಅಚ್ಚರಿಯಿಲ್ಲ. ಇನ್ನೆರಡು ವಾರಗಳಲ್ಲಿ ಬಣಗಳು ಸೃಷ್ಟಿಯಾದರೆ ಸೋಜಿಗವೇನಿಲ್ಲ.

ಎಲ್ಲೋ ದೂರದ ಪ್ಯಾಲೆಸ್ತೀನ್ ಇಸ್ರೇಲ್ ನಲ್ಲಿ ನಡೆಯುತ್ತಿರುವ ಮಾರಣಹೋಮಕ್ಕೂ ನಮಗೂ ಏನು ಸಂಬಂಧ? ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದುಕೊಳ್ಳುವವರ ಮುಂದೆ ಕೆಲ ವಿಚಾರಗಳನ್ನಿಡುತ್ತೇನೆ.

1. ಇಂತಹ ದಾಳಿ ಜಗತ್ತಿನ ಯಾವ ಭಾಗದಲ್ಲೇ ನೆಡೆದರು ಭಯ ಮಾತ್ರ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತದೆ. ದಾಳಿಗೆ ಬಲಿಯಾಗುವವರು ಸ್ಥಳೀಯರಾದರೆ, ಭಯಕ್ಕೆ ತುತ್ತಾಗುವವರು ಇಡೀ ಜಗತ್ತಿನ ಜನರು. ಈ ಭಯ ಪಸರಿಸುವ ಕಾರ್ಯದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತವೆ. ಮಾಧ್ಯಮಗಳು ನೇರವಾಗಿ ಅಲ್ಲದಿದ್ದರೂ ಅವ್ಯಕ್ತವಾಗಿ ಉಗ್ರರ ಜೊತೆ ಭಾಗಿಯಾಗುತ್ತಾರೆ.
2. ಭಯ ಎಲ್ಲೆಡೆ ವ್ಯಾಪಿಸಿ, ಜನರ ಮನಸ್ಸನ್ನು ಆವರಿಸಿಕೊಂಡಾಗ ಅವರ ಮಾಡುವ ಆಯ್ಕೆಗಳು ಭಾವುಕವಾಗಿರುತ್ತವೆ ಹೊರತು ತರ್ಕಬದ್ಧವಾಗಿರುವುದಿಲ್ಲ.
3. ಯುದ್ಧದ ಸಂಧಿಗ್ದ ಪರಿಸರದಲ್ಲಿ ಜನರು ಸಂರಕ್ಷಕ, ಉದ್ದಾರಕನಿಗಾಗಿ ಹುಡುಕತೊಡಗುತ್ತಾರೆ.
4. “ನಾನೇ ನಿಮ್ಮ ಸಂರಕ್ಷಕ, ನಿಮ್ಮ ಮತ ನನಗೇ ಚಲಾಯಿಸಿ” ಎಂದು ಕೇಳುವ ನಾಯಕರು ವ್ಯಾಪಕ ಭಯದ ಅನುಕೂಲ ಪಡೆಯುತ್ತಾರೆ.
5. ಜಗತ್ತಿನ ಪ್ರತಿ ದೇಶಗಳಲ್ಲೂ ಬೇಹುಗಾರಿಕೆ ಹೆಚ್ಚಾಗಿ, ವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗುತ್ತದೆ.
6. ಧ್ರುವೀಕರಣ ಸುಗಮವಾಗುತ್ತದೆ.
7. ಕಠಿಣ ಕಾನೂನುಗಳು ಜಾರಿಯಾಗುತ್ತವೆ. ಪ್ರಭುತ್ವವನ್ನ ಪ್ರಶ್ನಿಸುವವರ ಬಂಧನಕ್ಕೆ ಈ ಕಾನೂನುಗಳನ್ನ ಬಳಸಲಾಗುತ್ತದೆ.
8. “ರಾಷ್ಟ್ರಕ್ಕಾಗಿ” ಮಾನವ ಹಕ್ಕುಗಳ ಉಲ್ಲಂಘನೆ ಸಹನೀಯ ಎಂಬ ನಿರ್ಧಾರವನ್ನ ಜನ ಸಮರ್ಥಿಸಿಕೊಳ್ಳುತ್ತಾರೆ.
9. ರಕ್ಷಣೆಗೆಂದು ಶಸ್ತ್ರಾಸ್ತಗಳ ಖರೀದಿ ಬಿರುಸಾಗುತ್ತದೆ.
10. ಜನರಲ್ಲಿ ಪರಸ್ಪರ ಅಪನಂಬಿಕೆ ತೀವ್ರವಾಗುತ್ತದೆ.
11. “ರಾಷ್ಟ್ರಕ್ಕಾಗಿ” ಜನ ತಮ್ಮ ಖಾಸಗಿತನ ತ್ಯಾಗ ಮಾಡಲು ಮುಂದಾಗುತ್ತಾರೆ.
12. ಕಣ್ಗಾವಲು ಅತಿರೇಕಕ್ಕೇರುತ್ತದೆ.
14. ಇಂಟ್ರುಸಿವ್ ತಂತ್ರಜ್ಞಾನಕ್ಕೆ ಪ್ರಭುತ್ವ ಅನುಮತಿ ನೀಡುತ್ತದೆ. ಕದ್ದಾಲಿಸುವಿಕೆ ಸಹಜವಾಗುತ್ತದೆ.
ಮೇಲಿನ ಹದಿನಾಲ್ಕು ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತ್ವರಿತಗತಿಯಲ್ಲಿ ಜಗತ್ತಿನ ಎಲ್ಲಾ ದೇಶಗಳಲ್ಲೂ ಅನುಷ್ಠಾನಗೊಳ್ಳುತ್ತವೆ. ಭಾರತ ಇದಕ್ಕೆ ಹೊರತಾಗಿಲ್ಲ.

ಪ್ಯಾಲೆಸ್ತೀನ್ “ಉಗ್ರರ” ಸಂಘಟನೆಯಾದ ಹಮಾಸ್ ನೆಡೆಸಿದ ದಾಳಿಯಿಂದ ತತ್ತರಿಸಿ ಹೋಗಿರುವ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನಾತನ್ಯಾವು ” ವೀ ಆರ್ ಅಟ್ ವಾರ್” ಎಂದು ಘೋಷಿಸಿದಾಗ ನನಗೆ ತಟ್ಟನೆ ನೆನಪಾದದ್ದು 1972ರಲ್ಲಿ ಅಂದಿನ ಇಸ್ರೇಲ್ ಪ್ರಧಾನಿ ಗೋಲ್ಡ ಮೇಯರ್ ಆಡಿದ ಮಾತುಗಳು- “ಶಾಂತಿಯನ್ನು ಮರೆತುಬಿಡಿ, ನಾವೀಗ ಅವರಿಗೆ ನಮ್ಮ ತಾಕತ್ತು ತೋರಿಸಬೇಕಿದೆ.”

1972. ಜರ್ಮನಿಯ ಮ್ಯುನಿಕ್ ನಗರದಲ್ಲಿ ಅದ್ದೂರಿ ಒಲಿಂಪಿಕ್ಸ್. ಕ್ರೀಡಾಪಟುಗಳಿಗೆಂದೇ ನಿರ್ಮಿಸಿದ ಕಟ್ಟಡದೊಳಕ್ಕೆ “ಬ್ಲಾಕ್ ಸೆಪ್ಟೆಂಬರ್” ಎಂಬ ಪ್ಯಾಲೇಸ್ತೀನಿ ತೀವ್ರಗಾಮಿಗಳ ಗುಂಪು ನುಸುಳುತ್ತದೆ. ಇಸ್ರೇಲಿನ ಇಬ್ಬರು ಕ್ರೀಡಾಳುಗಳನ್ನ ಕೊಂದು ಉಳಿದ ಒಂಬತ್ತು ಮಂದಿಯನ್ನ ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುತ್ತದೆ. ಇಸ್ರೇಲಿನ ಸೆರೆಮನೆಗಳಲ್ಲಿ ನರಕ ಯಾತನೆ ಅನುಭವಿಸುತ್ತಿದ್ದ ೨೩೪ ಪ್ಯಾಲೇಸ್ತೀನಿ ಬಂಧಿಗಳನ್ನು ಬಿಡುಗಡೆ ಮಾಡಿ ಈಜಿಪ್ಟಿಗೆ ಸ್ಥಳಾಂತರ ಮಾಡಬೇಕೆಂದು ಬೇಡಿಕೆಯಿಡುತ್ತದೆ. ಬೇಡಿಕೆಗಳಿಗೆ ಒಪ್ಪದ ಗೋಲ್ಡ ಮೇಯರ್ ” ಉಗ್ರಗಾಮಿಗಳೊಂದಿಗೆ ಯಾವ ಮಾತುಕತೆಯು ಸಾಧ್ಯವಿಲ್ಲವೆಂದು” ಅಬ್ಬರಿಸುತ್ತಾಳೆ.

ಕ್ರೀಡಾಪಟುಗಳನ್ನು ಪಾರು ಮಾಡಲು ತಂತ್ರ ರೂಪಿಸಲಾಗುತ್ತದೆ. ಒಂದು ಸಿನಿಮೀಯ ಕ್ಷಿಪ್ರ ಕಾರ್ಯಾಚರಣೆ ಗೊಂದಲಮಯವಾಗಿ ಐವರು ಉಗ್ರರ ಜೊತೆಗೆ ಯುಹೂದಿ ಕ್ರೀಡಾಪಟುಗಳು ಹತರಾಗುತ್ತಾರೆ. ಇಡೀ ಇಸ್ರೇಲ್ ಸೇಡಿಗಾಗಿ ಹಾತೊರೆಯುತ್ತದೆ. ಜನರ ಸೇಡು, ಆವೇಶಕ್ಕೆ ಸ್ಪಂದಿಸುವ ಸುಲಭದ ಹಾದಿ ತನ್ನನ್ನು ಮತ್ತಷ್ಟು ಜನಪ್ರಿಯಳ್ಳನ್ನಾಗಿಸಬಹುದೆಂದು ಅರಿತ ಪ್ರಧಾನಿ ಗೋಲ್ಡ ಮೇಯರ್ ಸೇಡಿನ ಪಡೆಯೊಂದನ್ನ ಸೃಷ್ಟಿಸುತ್ತಾಳೆ. ಆಯ್ದ ನುರಿತ ಇಸ್ರೇಲಿ ಹಂತಕರ ಕೆಲಸ ಜಗತ್ತಿನಾದ್ಯಂತ ನೆಲೆಸಿರುವ ಪ್ಯಾಲೇಸ್ತೀನಿ ವಿಮೋಚನೆ ಕುರಿತು ಸಹಾನುಭೂತಿ ಇರುವವರನ್ನ, ಬ್ಲಾಕ್ ಸೆಪ್ಟೆಂಬರ್ ಗುಂಪಿಗೆ ನೆರವಾದವರನ್ನ ಹೆಕ್ಕಿ ಹೆಕ್ಕಿ ಕೊಲ್ಲುವುದು! ಪ್ರತಿಕಾರ, ಪ್ರತಿದಾಳಿ ಪ್ಯಾಲೇಸ್ತೀನಿ ಉಗ್ರರಿಗೆ ಎಚ್ಚರಿಕೆ ಗಂಟೆಯಾಗಿ ಮುಂದೆಂದೂ ಅವರು ಆಕ್ರಮಣ ಮಾಡಲು ಧೈರ್ಯ ತೋರಲಾರರು ಎಂಬುದು ಗೋಲ್ಡ ಮೇಯರ್ ಲೆಕ್ಕಾಚಾರವಾಗಿತ್ತು.

ಸೇಡಿನ ಪಡೆ ತೀರಾ ನಿರ್ದಯವಾಗಿ ಕೆಲವರನ್ನ ಕೊಂದರು, ಹತರಾದವರು ಕೂಡ ಅವರಂತೆಯೇ ಸರಳ ಮಾನವೀಯ ವ್ಯಕ್ತಿಗಳಂತೆ ಕಾಣತೊಡಗುತ್ತಾರೆ. ಭಾವನೆಗಳನೆಲ್ಲಾ ಬದಿಗೊತ್ತಿ ಅವರನ್ನ ಸೇಡಿನ ಪಡೆ ಕೊಂದರು, ಸತ್ತವರ ಖಾಲಿ ಸ್ಥಳವನ್ನ ಮತ್ತಷ್ಟು ಉಗ್ರರು ತುಂಬಲು ಬಹಳ ಕಾಲ ಹಿಡಿಯುವುದಿಲ್ಲ! ಸೇಡೊಂದು ವಿಷ ವರ್ತುಲವಾಗಿ ಪರಿವರ್ತನೆಯಾಗುತ್ತದೆ. ಕೊಲ್ಲುವವರಿಗೂ, ಹತರಾದವರಿಗೂ ಅಷ್ಟೇನೂ ವ್ಯತ್ಯಾಸವಿಲ್ಲವಾಗುತ್ತದೆ. ಸೇಡಿನ ಪಡೆ ಮಾನಸಿಕವಾಗಿ ಘಾಸಿಗೊಳ್ಳುತ್ತದೆ. ನಿಜವಾದ ಉಗ್ರರಾರು, ನಾವ, ಅವರ ಎಂಬ ಪ್ರಶ್ನೆ ಕೇಳಿಕೊಳ್ಳತೊಡಗುತ್ತದೆ. ತಮ್ಮ ಪ್ರಶ್ನಾತೀತ ಸ್ವಾಮಿ ನಿಷ್ಠೆಯನ್ನ ಅನುಮಾನದಿಂದ ನೋಡತೊಡಗುತ್ತದೆ. ಕೊನೆಗೊಂದು ದಿನ ಇಡೀ ಪಡೆ ಚೂರು ಚೂರಾಗಿ ಕರಗಿಹೋಗುತ್ತದೆ. (ಜಾರ್ಜ್ ಜೋನಸ್ ಬರೆದ ಕೃತಿ “vengeance” ಓದಿ ಅಥವಾ ಸ್ಟೀವನ್ ಸ್ಪಿಲ್ ಬರ್ಗ್ ರವರ ಮ್ಯುನಿಕ್ ಚಿತ್ರ ನೋಡಿ)

ಹಿಂಸೆ ಎಂದೆಂದಿಗೂ ಸಮರ್ಥನೀಯವಲ್ಲ, ಭಯೋತ್ಪಾದನೆ ನ್ಯಾಯಯುತವಲ್ಲ. ಆದರೆ ಪ್ರತಿಕಾರದ ಆಕ್ರೋಶದಲ್ಲಿ ಮುಗ್ಧರ ಬಲಿ ಕೂಡ ಅಷ್ಟೇ ತಪ್ಪು. ಉಗ್ರಗಾಮಿಯಾಗಲಿ ಅಥವಾ ಸೇಡಿನ ಪಡೆಯವರಾಗಲಿ ಬಳಸುವ ಸಾಧನಗಳು ಒಂದೇ- ಬಾಂಬು/ಬುಲೆಟ್ ಮತ್ತು ಅಂತ್ಯ ಒಂದೇ- ರಕ್ತಪಾತ. ಸೇಡು ತೀರಿಸಿಕೊಳ್ಳಲು ಮುಂದಾಗುವವನು ಹಂತಕನಷ್ಟೇ ಕ್ರೂರಿಯಾಗಬೇಕಾಗುತ್ತದೆ. ಅನಾಗರಿಕನಾಗಬೇಕಾಗುತ್ತದೆ. ಕ್ರೌರ್ಯವೆಸಬೇಕಾಗುತ್ತದೆ. ಮಾನವೀಯತೆ ಕಳೆದುಕೊಳ್ಳಬೇಕಾಗುತ್ತದೆ. ಆತ್ಮವನ್ನೇ ಅಡವಿಟ್ಟು ಮಾಡುವ ಇಂತಹ ಡರ್ಟಿ ವಾರ್ ಗಳ ಅಂತಿಮ ಫಲಿತಾಂಶ ಪಾಪ ಪ್ರಜ್ಞೆ, ಮಾನಸಿಕ ಖಿನ್ನತೆ ಮತ್ತು ಭಯವೆಂಬುದನ್ನ ಸ್ಪಿಲ್ ಬರ್ಗ್ ಚಿತ್ರ “ಮ್ಯುನಿಕ್” ಸಾರುತ್ತದೆ.

ಅಫಘಾನಿಸ್ತಾನ, ಲಿಬಿಯಾ, ಇರಾಕ್, ಸಿರಿಯಾಗಳಲ್ಲಿ ನೆಡೆದ ಪ್ರತಿದಾಳಿಗಳಿಂದ ದೊರೆತ ಫಲವೇನೆಂದು ಪ್ರಶ್ನಿಸಿಕೊಂಡರೆ ಉತ್ತರ ಸ್ಪಷ್ಟವಾಗುತ್ತದೆ. 9/11ರ ಸೇಡು ತೀರಿಸಿಕೊಳ್ಳಲು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ ಅಮೇರಿಕಾ ಮತ್ತಷ್ಟು ಪ್ರಬಲ ತಾಲಿಬಾನಿಗಳಿಗೆ ದಾರಿ ಮಾಡಿಕೊಟ್ಟು ಕಾಲ್ಕಿತ್ತಿತ್ತು. ಅಮೇರಿಕಾ ಎರಡು ಸಾವಿರಕ್ಕೂ ಹೆಚ್ಚು ಸೈನಿಕರನ್ನ ಕಳೆದುಕೊಂಡಿತು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಅಮೇರಿಕನ್ ಸೈನಿಕರು ಗಾಯಗೊಂಡರು. ಅಫ್ಘಾನಿಸ್ತಾನ, ಅಮೇರಿಕಾಕ್ಕೆ ಎರಡನೇ ವಿಯೆಟ್ನಾಂ- ಮರೆಯಲಾಗದ ತೀವ್ರ ಮುಖಭಂಗ. ಇನ್ನು ಇರಾಕ್, ಲಿಬಿಯಾ, ಸಿರಿಯಾಗಳಲ್ಲಿ ಅಮೇರಿಕಾದ ದುಸ್ಸಾಹಸ ಜನರ ಜೀವನ ಹಾಳುಮಾಡಿದಲ್ಲದೆ ಐಸಿಸ್ ನಂತಹ ಭೀಭತ್ಸ ಉಗ್ರರನ್ನ ಹುಟ್ಟುಹಾಕಿತು. ಅಫ್ಘಾನಸ್ತಾನದ ನೆಪದಲ್ಲಿ ಜಾರ್ಜ್ ಬುಷ್ ರಾಷ್ಟ್ರಪತಿಯಾಗಿ ಮರು ಆಯ್ಕೆಯಾದ. ಕಾನೂನು ಬದಲಾವಣೆ ಮಾಡಲು ಹೋಗಿ ಹಿನ್ನಡೆ ಅನುಭವಿಸಿದ್ದ, ಜನಪ್ರಿಯತೆ ಹಳ್ಳ ಹಿಡಿದಿದ್ದ ಬೆಂಜಮಿನ್ ನಾತನ್ಯಾವುಗೆ ಈ ದಾಳಿ ಯಾವ ರೀತಿಯ ಸವಾಲಾಗಬಹುದು ಕಾದುನೋಡಬೇಕಿದೆ.

ಮಹಾಯುದ್ಧಗಳು, ಬಾಲ್ಫೋರ್ ಘೋಷಣೆ, ನಾಝಿಗಳು ಮಾಡಿಕೊಂಡ ಒಪ್ಪಂದ, ಬ್ರಿಟಿಷರು ಮಾಡಿದ ಎಡವಟ್ಟು, ವಿಶ್ವಸಂಸ್ಥೆಯ ವಿಭಜನೆ ಯೋಜನೆ, ಆರು ದಿನಗಳ ಯುದ್ಧ, ಯೆಸ್ಸೆರ್ ಸಾವು, ಪಿಎಲ್ ಓ ನೈತಿಕ ದಿವಾಳಿತನ, ಅರಬ್ಬರ ಅಸಡ್ಡೆ, ಅಮೇರಿಕಾದ ಹಸ್ತಕ್ಷೇಪ, ಓಸ್ಲೋ ಒಪ್ಪಂದ, ಯುಹೂದಿಯರ ನಿರಂತರ ಭೂ ಕಬಳಿಕೆ, ಅಕ್ರಮ ನೆಲಸುವಿಕೆ, ಪ್ಯಾಲೇಸ್ತೀನಿಯರ ಗುಳೆ ಎಬ್ಬಿಸುವಿಕೆ, ದಶಕಗಳ ಅವಮಾನ, ಮೂಲಭೂತ ಸೌಕರ್ಯಗಳ ನಿರಾಕರಣೆ, ಪುಟ್ಟ ಕಂದಮ್ಮಗಳ ಕಗ್ಗೊಲೆ, ಪವಿತ್ರ ಆಲ್- ಆಕ್ಸ್ ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿ, ಮಸೀದಿಯೊಳಗೆ ಪ್ರಾರ್ಥನಾ ನಿರತ ಹಿರಿಯರ ಥಳಿಸುವಿಕೆ ಪ್ಯಾಲೆಸ್ಟೈನನ್ನು ಇಂದಿಗೆ ಕಾದ ಕಾವಲಿಯಾಗಿಸಿದೆ. ಅಲ್ಲಿನ ಜನರ ಎದೆಯಲ್ಲಿ ಬೆಂಕಿಯಿದೆ, ಕರುಳು ಸುಡುತಿದೆ, ಪ್ರೀತಿ ಪಾತ್ರರ ಅಗಲಿಕೆ ಎಲ್ಲೆಡೆಯಿದೆ, ಕಣ್ಣಲಿ ಆಕಾಂಕ್ಷೆ ಮಡುಗಟ್ಟಿದೆ…

ಸರ್ವಸ್ವವನ್ನೂ ಕಳೆದುಕೊಂಡ ಪ್ಯಾಲೆಸ್ತೀನ್ ಯುವಕರನ್ನ ನೋಡಿದಾಗ ನನಗೆ ಕೊಲಂಬಿಯಾದ ಕವಿ ಜೋತಮರಿಯೋ ಬರೆದ ಒಂದು ಕವಿತೆ ನೆನಪಾಗುತ್ತದೆ

ಯುದ್ಧ ಮುಗಿದ
ಮೇಲೊಂದು ದಿನ
ಯುದ್ಧವಿದ್ದರೆ
ಯುದ್ಧದ ಬಳಿಕ
ಒಂದು ದಿನವಿದ್ದರೆ
ನಾನು ನಿನ್ನನು
ತೊಳಲಿ ಬಳಸುವೆ

ಯುದ್ಧ ಮುಗಿದ
ಮೇಲೊಂದು ದಿನ
ಯುದ್ಧವಿದ್ದರೆ
ಯುದ್ಧದ ಬಳಿಕ
ಒಂದು ದಿನವಿದ್ದರೆ
ತೋಳುಗಳು ಉಳಿದಿದ್ದರೆ
ಪ್ರೀತಿಯಿಂದ ಬಿಗಿದಪ್ಪಿ
ಮುತ್ತಿಕ್ಕುವೆ.

ಯುದ್ಧ ಮುಗಿದ
ಮೇಲೊಂದು ದಿನ
ಯುದ್ಧವಿದ್ದರೆ
ಯುದ್ಧದ ನಂತರ
ಒಂದು ದಿನವಿದ್ದರೆ
ಯುದ್ಧದ ಬಳಿಕ
ಪ್ರೀತಿ ಉಳಿದಿದ್ದರೆ
ಪ್ರೀತಿಸುವ ಮನಸಿದ್ದರೆ…

ಈ ಕವಿತೆಯ ಜೊತೆಗೆ ಜೊತೆಗೆ ಪ್ಯಾಲೆಸ್ತೀನೀ ಕವಿ ಮತ್ತು ಹೋರಾಟಗಾರ ಮಹಮ್ಮದ್ ದರ್ವಿಶರ ಈ ಮಾತು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತವೆ.

“ಕಾವ್ಯಕ್ಕೆ ಚರಿತ್ರೆಯನ್ನು ಬದಲಾಯಿಸುವ, ಮನುಷ್ಯರಲ್ಲಿ ಮಾನವೀಯತೆಯನ್ನು ತುಂಬುವ ಶಕ್ತಿಯಿದೆ. ಕಾವ್ಯ ಎಲ್ಲವನ್ನೂ ಪರಿವರ್ತಿಸಬಲ್ಲುದು ಎಂದುಕೊಂಡಿದ್ದೆ. ಕವಿಗಳನ್ನ ಜನರ ಬಳಿ ಒಯ್ಯಲು, ಲೋಕವನ್ನು ಹಚ್ಚಿಕೊಳ್ಳುವಂತೆ ಮಾಡಲು ಇಂತಹ ಭ್ರಮೆಗಳೆಲ್ಲ ಬೇಕಾಗುತ್ತವೆ. ಆದರೆ ಈಗ, ಕಾವ್ಯವು ಕವಿಯನ್ನು ಮಾತ್ರ ಬದಲಾಯಿಸುತ್ತದೆ ಎಂದು ನನಗನಿಸುತ್ತಿದೆ.”

ಈ ಲೇಖನ ಬರೆಯುವಷ್ಟರಲ್ಲಿ ಸಾವಿರದ ಇನ್ನೂರು ಜೀವಗಳು ಬಾರದ ಲೋಕಕ್ಕೆ ಹಾರಿಹೋಗಿವೆ. ಹಿಂಸೆ ಮತ್ತಷ್ಟು ಹಿಂಸೆಗೆ ಪ್ರೇರಣೆಯಾಗಿದೆ. ಉಕ್ಕಿ, ಉಬ್ಬುಬ್ಬಿ, ಹಬ್ಬಿ ಹರಿಯುತಿದೆ ನೆತ್ತರ ನದಿ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ