ಸರಕಾರ ಅನುಮತಿ ನೀಡಲಿ ಅಥವಾ ನಿರಾಕರಿಸಲಿ, ಅ.13ರಂದು ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ. ಇದಕ್ಕಾಗಿ ಅಂದು ಬೆಳಗ್ಗೆ ಮಂಡ್ಯದಿಂದ ಮೈಸೂrರಿಗೆ ಸಾವಿರಾರು ಮಂದಿ ಬೈಕ್ ರ್ಯಾಲಿ ತೆರಳಲಿದ್ದೇವೆ ಎಂದು ಸಮಾನ ಮನಸ್ಕರ ವೇದಿಕೆ ಸಂಚಾಲಕ ಹಾಗೂ ನ್ಯಾಯವಾದಿ ಲಕ್ಷ್ಮಣ್ ಚೀರನಹಳ್ಳಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೆಲೆದ ಮೂಲ ನಿವಾಸಿಗಳಾದ ದ್ರಾವಿಡ ದೊರೆ ಮಹಿಷನ ವಿರುದ್ಧ ನಡೆಯುವ ಎಲ್ಲ ಅಪಪ್ರಚಾರಗಳನ್ನು ವಿರೋಧಿಸಿ ನಡೆಯುವ ಉತ್ಸವಗಳು, ಕಾರ್ಯಕ್ರಮಗಳನ್ನು ನಮ್ಮ ಸಮಾನ ಮನಸ್ಕರ ವೇದಿಕೆ ಬೆಂಬಲಿಸುತ್ತದೆ. ಬಹುಸಂಸ್ಕೃತಿಯ ಉಳಿವು ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗಾಗಿ ನಾವು ಸದಾಕಾಲ ಬದ್ಧರಾಗಿದ್ದೇವೆ ಎಂದರು.
ಜನಪದದ ಹಿನ್ನಲೆಯಲ್ಲೂ ಕೂಡ ಈ ನಾಡು ಮಹಿಷನಿಗೆ ಸೇರಿದ್ದು ಎಂಬುದಕ್ಕೆ ಚಾರಿತ್ರಿಕ ಹಿನ್ನಲೆಯ ದಾಖಲೆಗಳಿವೆ. ದ್ರಾವಿಡ ನಾಡಿನಲ್ಲಿ ಮಹಿಷನ ಉತ್ಸವಗಳು ಹಿಂದೆಯೂ ನಡೆಯುತ್ತಿದ್ದವು. ಮುಂದೆಯೂ ನಡೆಯಲಿವೆ ಹಾಗೂ ಮೈಸೂರಿನಲ್ಲಿ ಅ.13ರಂದು ಮಹಿಷ ದಸರಾ ನಡೆದೇ ನಡೆಯುತ್ತದೆ. ಇದಕ್ಕಾಗಿ ಅಂದು ಬೆಳಗ್ಗೆ 7ಕ್ಕೆ ಮಂಡ್ಯನಗರದ ಡಿಸಿ ಕಚೇರಿ ಎದುರಿನ ಭವ್ಯವನದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಿ, ಮೈಸೂರಿಗೆ ತೆರಳಲಾಗುವುದು ಎಂದರು.
ವೇದಿಕೆಯ ಮುಖಂಡ ಟಿ.ಡಿ.ನಾಗರಾಜ್ ಮಾತನಾಡಿ, ಮಹಿಷ ದಸರಾ ಆಚರಣೆಯನ್ನು ಪೊಲೀಸ್ ಇಲಾಖೆ ನಿರ್ಬಂಧಿಸಿರುವುದು ತಪ್ಪು. ಹಾಗೆಯೇ ಸಂಸದ ಪ್ರತಾಪ್ಸಿಂಹ ಅವರು ರೌಡಿಯಂತೆ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಿಷ ದಸರಾವನ್ನು ವಿರೋಧಿಸುತ್ತಿರುವುದು ಅವರೊಬ್ಬರೇ. ಹೀಗಾಗಿ ಸರಕಾರ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಎಂ.ವಿ.ಕೃಷ್ಣ, ನರಸಿಂಹಮುರ್ತಿ, ದೇವರಾಜ್ಕೊಪ್ಪ, ಶಂಕರ್ಗುರು, ಮಹಮ್ಮದ್ ತಾಹೇರ್ ಉಪಸ್ಥಿತರಿದ್ದರು.




