Saturday, May 18, 2024

ಪ್ರಾಯೋಗಿಕ ಆವೃತ್ತಿ

ಹಮಾಸ್‌ ವಿತ್ತ ಸಚಿವರ ಹತ್ಯೆ ಮಾಡಿದ್ದೇವೆ ಎಂದ ಇಸ್ರೇಲ್

ಕಳೆದ ರಾತ್ರಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್‌ನ ವಿತ್ತ ಸಚಿವ ಮತ್ತು ಹಮಾಸ್‌ನ ಪಾಲಿಟ್‌ಬ್ಯುರೊದ ಹಿರಿಯ ಅಧಿಕಾರಿ ಮೃತಪಟ್ಟಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಹೇಳಿವೆ.

ಹಮಾಸ್‌ ವಿತ್ತ ಸಚಿವ ಜವಾದ್ ಅಬು ಶಮಲಾ ಮತ್ತು ಜಕರಿಯಾ ಅಬು ಮೊಅಮ್ಮರ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಜವಾದ್ ಅಬು ಶಮಲಾ ಅವರು ಹಮಾಸ್‌ಗೆ ನಿಧಿಯನ್ನು ನೀಡುತ್ತಿದ್ದರು ಮತ್ತು ಗಾಜಾ ಪಟ್ಟಿಯ ಒಳಗೆ ಮತ್ತು ಹೊರಗೆ ಇಸ್ರೇಲ್ ವಿರುದ್ಧದ ಕೃತ್ಯಕ್ಕೆ ಹಣಕಾಸು ನೀಡುತ್ತಿದ್ದರು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಹತ್ಯೆಯಾದ ಜಕರಿಯಾ ಅಬು ಮೊಅಮ್ಮರ್, ಹಮಾಸ್‌ ಸಶಸ್ತ್ರ ಗುಂಪಿನ ಆಂತರಿಕ ವ್ಯವಹಾರಗಳ ಮುಖ್ಯಸ್ಥನಾಗಿದ್ದರು. ಹಿರಿಯ ಹಮಾಸ್ ನಾಯಕರು ಮತ್ತು ಗಾಜಾ ಪಟ್ಟಿಯಲ್ಲಿರುವ ಸಶಸ್ತ್ರ ಗುಂಪಿನ ನಡುವೆ ಸಂಯೋಜಕರಾಗಿದ್ದರು ಎಂದು IDF ಹೇಳಿದೆ.

ಆದರೆ ಈ ಇಬ್ಬರು ಹಮಾಸ್‌ನ ನಾಯಕರ ಹತ್ಯೆಯ ಬಗ್ಗೆ ಹಮಾಸ್‌ ಸಶಸ್ತ್ರ ಗುಂಪು ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಇಸ್ರೇಲ್ ವಿರುದ್ಧ ಹಮಾಸ್‌ ಸಶಸ್ತ್ರ ಗುಂಪು ಶನಿವಾರ 5000ಕ್ಕೂ ಅಧಿಕ ರಾಕೆಟ್‌ ದಾಳಿಯನ್ನು ನಡೆಸಿದ ಬಳಿಕ ಇಸ್ರೇಲ್‌ ಯುದ್ಧ ಘೋಷಿಸಿತ್ತು. ಆ ಬಳಿಕ ಎರಡು ದೇಶಗಳಲ್ಲಿ ಅಪಾರ ಸಾವು-ನೋವುಗಳು ಸಂಭವಿಸಿದೆ. ಇತ್ತೀಚಿನ ವರದಿ ಪ್ರಕಾರ ಇಸ್ರೇಲ್‌- ಪ್ಯಾಲೆಸ್ತೀನ್‌ ಕದನದಲ್ಲಿ ಮೃತರ ಸಂಖ್ಯೆ 1900ಕ್ಕೆ ಏರಿಕೆಯಾಗಿದೆ.

ಆದರೆ ಸುಮಾರು 1500 ಹಮಾಸ್‌ ಹೋರಾಟಗಾರರ ಮೃತದೇಹಗಳು ಇಸ್ರೇಲ್‌ನಲ್ಲಿ ಗಾಝಾ ಪಟ್ಟಿಯ ಸುತ್ತಲಿನ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲ್‌ ಸೇನೆ ನಿನ್ನೆ ಹೇಳಿತ್ತು. ಇದಲ್ಲದೆ ಗಾಝಾ ಜೊತೆಗಿನ ಗಡಿ ಪ್ರದೇಶದಲ್ಲಿ ಇಸ್ರೇಲ್‌ ಬಹುಪಾಲು ನಿಯಂತ್ರಣ ಮರುಸ್ಥಾಪಿಸಿದೆ ಎಂದು ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಚರ್ಡ್‌ ಹೆಚ್ಟ್‌ ಹೇಳಿದ್ದರು.

ಹಮಾಸ್ ಇಸ್ರೇಲ್ ಮೇಲೆ ಸರಣಿ ರಾಕೆಟ್‌ ದಾಳಿಯನ್ನು ಭೂ, ವಾಯು, ನೌಕಾ ಮಾರ್ಗದಲ್ಲಿ ನಡೆಸಿತ್ತು. ಇಸ್ರೇಲ್‌ನ ವಿವಿಧ ಪ್ರಾಂತ್ಯಗಳಲ್ಲಿ ನುಗ್ಗಿ ಜನರನ್ನು ಒತ್ತೆಯಾಳಾಗಿಟ್ಟಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!