ಜಯಂತಿಗಳ ಪೂರ್ವಭಾವಿ ಸಭೆಗಳಿಗೆ ಬಾರದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಲೋಕೇಶ್ ಎಚ್ಚರಿಕೆ ನೀಡಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಕೆಲವು ಅಧಿಕಾರಿಗಳು ಯಾವುದೇ ಪೂರ್ವಭಾವಿ ಸಭೆಗೆ ಹಾಜರಾಗದೆ ಆ ಕಾರ್ಯಕ್ರಮಕ್ಕೆ ಆಗೌರವ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನ ಸ್ತಂಭಗಳ ಅಧಿಕಾರಿಗಳಾದ ಪುರಸಭೆ ಮುಖ್ಯ ಅಧಿಕಾರಿ ಮತ್ತು ತಾಲೂಕು ಪಂಚಾಯಿತಿ ಇ. ಓ ಇವರ ಜೊತೆಗೆ ಕೆಲವು ತಾಲೂಕು ಮಟ್ಟದ ಅಧಿಕಾರಿಗಳು ಪೂರ್ವಭಾವಿ ಸಭೆಗೆ ಬಾರದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಅಧಿಕಾರಿಗಳು ಬಾರದೆ ಇಲಾಖೆ ಸಿಬ್ಬಂದಿ ಕಳುಹಿಸುತ್ತಿದ್ದಾರೆ, ಇದರಿಂದ ಸಭೆಯಲ್ಲಿ ನಿರ್ಣಯ ಕೈ ಗೊಳ್ಳಲು ಕಷ್ಟವಾಗುತ್ತದೆ, ಇದೇ ರೀತಿ ಮುಂದುವರಿದರೆ ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್, ಪಶು ಸಂಗೋಪನ ಇಲಾಖೆ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಕೆಲವು ಅಧಿಕಾರಿಗಳು ಹಾಜರಿದ್ದರು.




