Wednesday, May 1, 2024

ಪ್ರಾಯೋಗಿಕ ಆವೃತ್ತಿ

ಹಣ್ಣಿನ ಅಂಗಡಿ ಮೇಲೆ ನಗರಸಭೆ ದಾಳಿ| ಹೋರಾಟಗಾರರ ವಿರುದ್ಧವೇ ಕೇಸ್ ದಾಖಲು

ಶಿವಮೊಗ್ಗ ಜಿಲ್ಲೆ ಸಾಗರ ನಗರಸಭೆ ಅಧಿಕಾರಿಗಳು ಸಾಗರದ ಕೆನರಾ ಬ್ಯಾಂಕ್ ಬಳಿಯ ಹಣ್ಣಿನ ಅಂಗಡಿಯನ್ನು ಏಕಾಏಕಿಯಾಗಿ ತೆರವುಗೊಳಿಸಿದ್ದರು. ಬಳಿಕ ಅಂಗಡಿ ಮಾಲೀಕ ಅದೇ ಜಾಗದಲ್ಲಿ ಮತ್ತೆ ವ್ಯಾಪಾರ ಆರಂಭಿಸಿದ್ದಾರೆಂಬ ಕಾರಣಕ್ಕೆ ನಗರಸಭೆ ಆಡಳಿತ ಅಂಗಡಿಯ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳ ನಡೆ ವಿವಾದಕ್ಕೆ ಕಾರಣವಾಗಿದೆ.

ನಗರಸಭೆ ಆಯುಕ್ತ ನಾಗಪ್ಪ ಮತ್ತು ಕೆಲವು ಅಧಿಕಾರಿಗಳು ಹಣ್ಣಿನ ಅಂಗಡಿ ಮೇಲೆ ದಾಳಿ ನಡೆಸಿ, ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಅಂಗಡಿಯಲ್ಲಿದ್ದ ಹಣ್ಣನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲದೆ, ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರು ‘ಸರ್ಕಾರಿ ಕೆಲಸಕ್ಕೆ ಅಡ್ಡಿಮಾಡಿದ್ದಾರೆ’ ಎಂಬ ಸುಳ್ಳು ಆರೋಪ ಮಾಡಿ, ಕೆಲವು ಹೋರಾಟಗಾರರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ಘಟನೆಗೆ ಸಂಬಂಧ ಸಾಮಾಜಿಕ ಹೋರಾಟಗಾರ, ಚಾರ್ವಾಕ ರಾಘು ಮಾಧ್ಯಮದ ಜೊತೆ ಮಾತನಾಡಿ, “ಹಣ್ಣಿನ ಅಂಗಡಿ ಮಾಲೀಕನ ಮೇಲೆ ದಾಳಿ ನಡೆದ ಬಳಿಕ ಬೀದಿಬದಿ ಹೋರಾಟಗಾರರ ಸಂಘವು ಹೋರಾಟಕ್ಕೆ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೋರಾಟಗಾರ, ಮಾಜಿ ಪುರಸಭೆ ಅಧ್ಯಕ್ಷ ತೀನ ಶ್ರೀನಿವಾಸ್, ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ‌ ಡಾ. ರಾಜನಂದಿನಿ ಕಾಗೋಡು ಸೇರಿದಂತೆ ಹಲವರ ಬೆಂಬಲದಿಂದ ನಗರಸಭೆ ಕಚೇರಿ ಎದರು ಹೋರಾಟ ನಡೆಯಿತು. ಪ್ರತಿಭಟನೆ ತಾರಕಕ್ಕೆ ಏರುತ್ತಿದ್ದಂತೆ ಆಡಳಿತದಲ್ಲಿರುವ ಬಿಜೆಪಿ, ಪ್ರಕರಣಕ್ಕೆ ಕೋಮು ಬಣ್ಣಬಳಿಯಲು ಮುಂದಾಗಿದೆ” ಎಂದು ಆರೋಪಿಸಿದ್ದಾರೆ. 

“ನಗರಸಭೆ ಆಯುಕ್ತ ನಾಗಪ್ಪ ಇಲ್ಲಿ ಹಲವು ವರ್ಷಗಳಿಂದ ನೌಕರಿ ಮಾಡುತ್ತಿದ್ದಾರೆ. ನಾಗಪ್ಪನವರ ಕೆಳಗೆ ಕೆಲಸ ಮಾಡುತ್ತಿದ್ದ ಹಲವರು ಹಣ್ಣಿನ ಅಂಗಡಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಮಾಡಬೇಕಿದ್ದ ನಗರಸಭೆ, ಬಿಜೆಪಿ ಆಡಳಿತದ ಜಿದ್ದಿಗೆ ಬಿದ್ದು, ಇದೀಗ ಮತ್ತೆ ಅಂಗಡಿ ಮಾಲಿಕನ ಮೇಲೆ ದೌರ್ಜನ್ಯ ನಡೆಸಿದೆ. ಅಲ್ಲದೆ, ನ್ಯಾಯಕ್ಕಾಗಿ ಹೋರಾಟ ಮಾಡಿದವರ ವಿರುದ್ಧ, ʼಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡೆಸಿದ್ದಾರೆʼ ಎಂದು ಸುಳ್ಳು ಕೇಸು ದಾಖಲು ಮಾಡಿ ಕೆಲವರನ್ನು ಬಂಧಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಕೋಮು ಬಣ್ಣ 

“ಈಡಿಗ ಸಮುದಾಯಕ್ಕೆ ಸೇರಿದ ಆಯುಕ್ತರ ಮೇಲೆ ಮುಸ್ಲಿಂ ಸಮುದಾಯದವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಆಯುಕ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ನಗರಸಭೆ ಸದಸ್ಯ ತಶ್ರೀಪ್ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ” ಎಂದು ಚಾರ್ವಾಕ ರಾಘು ತಿಳಿಸಿದ್ದಾರೆ.

“ಹೋರಾಟಗಾರ ತೀನ ಶ್ರೀನಿವಾಸ್ ಅವರನ್ನು ಗುರಿಯಾಗಿಸಿಕೊಂಡು ಅಯುಕ್ತ ನಾಗಪ್ಪ ಬೆದರಿಕೆ ಹಾಕುವ ರೀತಿ ಕೈ ಬೆರಳು ತೋರಿಸಿದರು. ಆಯುಕ್ತ ನಾಗಪ್ಪ ಬೇಕಾಬಿಟ್ಟಿ ವರ್ತಿಸಿದರು. ವಾಸ್ತವದಲ್ಲಿ ಆಯುಕ್ತರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತೇ ಹೊರೆತು ಯಾರೂ ಕೂಡ ಹಲ್ಲೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.

“ಚುನಾವಣೆ ಸಮಯವನ್ನು ಬಂಡವಾಳ ಮಾಡಿಕೊಂಡು ಬಿಜೆಪಿಗರು ಈಡಿಗರು ಮತ್ತು ಮುಸ್ಲಿಂ ಸಮುದಾಯದ ನಡುವೆ ಕೋಮು ದ್ವೇಷ ಬಿತ್ತುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರ ಭಾಗವಾಗಿ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು, ಪೌರಕಾರ್ಮಿಕರೂ ಪ್ರತಿಭಟನೆ ನಡೆಸುವಂತೆ ಇಲ್ಲಿನ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಕ್ಕರ್ ಒತ್ತಾಯಿಸುತ್ತಿದ್ದಾರೆ” ಎಂದು ದೂರಿದರು.

“ಹೋರಾಟಗಾರರು ಮುಸ್ಲಿಮರೆಂಬ ಕಾರಣಕ್ಕೆ ಮೊಹಮ್ಮದ್‌ ತಸ್ರೀಫ್‌, ಮೊಹಮ್ಮದ್‌ ಜಿಲಾನಿ, ಶಹಬಾದ್‌ ಅಹ್ಮದ್‌ ಅಡೂರು, ವಾಸಿಂ, ರಶೀದ್‌ ಸೇರಿದಂತೆ ಐವತ್ತು ಮಂದಿ ವಿರುದ್ಧ ಸುಳ್ಳು ಆರೋಪದ ಮೇಲೆ ಪ್ರಕರಣ ದಾಖಲಿಸಿರುವುದು ವಿಷಾಧನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!