Friday, November 20, 2026

ಪ್ರಾಯೋಗಿಕ ಆವೃತ್ತಿ

ಬಡವರ ಕೈಯಲ್ಲಿ ದುಡ್ಡು ಇರಬೇಕು ಎನ್ನುವುದು ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

ಜನರ ದುಡ್ಡು ಜನರ ಜೇಬಿಗೆ ಹಾಕಿದರೆ ಕೆಲವರಿಗೆ ಹೊಟ್ಟೆಯುರಿ. ಬಡವರ ಕೈಯಲ್ಲಿ ದುಡ್ಡು ಇರಬೇಕು ಎನ್ನುವುದು ನಮ್ಮ ಗುರಿ. ಹಣ ಇದ್ದರೆ ಆರ್ಥಿಕತೆಗೆ ಚೈತನ್ಯ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಆರ್ಥಿಕ ಚೈತನ್ಯ ತುಂಬುವ ಕಾರ್ಯಕ್ರಮವನ್ನು ನಾವು ಘೋಷಿಸಿ, ಸಾಧಿಸಿ ತೋರಿಸಿದ್ದೀವಿ. ಜನರಿಗೆ ನಾವು ಕೊಟ್ಟ ಹಣ ವಾಪಾಸ್ ಸರ್ಕಾರಕ್ಕೇ ಬರುತ್ತದೆ. ನಾವು ಪುನಃ ಜನರ ಜೇಬಿಗೆ ಅದೇ ಹಣವನ್ನು ಹಾಕುತ್ತೇವೆ. ಇದರಿಂದ ಜಿಡಿಪಿ, ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ ಎಂದು ನುಡಿದರು. 

ಗ್ಯಾರಂಟಿ ಯೋಜನೆ ಜಾರಿ ಆಗೋದಿಲ್ಲ, ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಆಡಿಕೊಂಡಿದ್ದರು. ಈಗ ನಾಡು ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಆಚರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ

ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಜತೆಗೆ ಸಮಾಜದ ಎಲ್ಲಾ ವರ್ಗದ ಬಡ-ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ವಿಚಾರದಲ್ಲಿ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ದೇಶದ ಯಾವ ಸರ್ಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸಾಧಿಸಿ ತೋರಿಸಿದೆ. ಸರ್ಕಾರದ ಸಾಧನೆಗಳ ದಾಖಲೆ ಕಣ್ಣ ಮುಂದಿದೆ. ವಿರೋಧ ಪಕ್ಷಗಳು ಸರ್ಕಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಜೂನ್ 11ಕ್ಕೆ ಶಕ್ತಿ ಯೋಜನೆ ಜಾರಿ ಆಯಿತು. ನವೆಂಬರ್ 23 ಕ್ಕೆ 100 ಕೋಟಿ 47 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಈ ಎಲ್ಲಾ ದಾಖಲೆಗಳು ಕಣ್ಣ ಮುಂದಿವೆ. ಆದರೂ ವಿರೋಧ ಪಕ್ಷಗಳು ಸುಳ್ಳು ಹೇಳುತ್ತವೆ. ಬಸ್ ಪ್ರಯಾಣಿಕರಲ್ಲಿ ಶೇ55 ರಷ್ಟು ಉಚಿತ ಬಸ್ ಪ್ರಯಾಣ ಮಾಡಿದ ಮಹಿಳೆಯರೇ ಇದ್ದಾರೆ. ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವುದು ನಮ್ಮ ಗುರಿ ಎಂದರು.

ವಿರೋಧ ಪಕ್ಷದವರ ಟೀಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. 1 ಕೋಟಿ 17 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇವರಲ್ಲಿ 1 ಕೋಟಿ 10 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ತಲುಪುತ್ತಿದೆ. ಎಲ್ಲಾ ಜಾತಿ-ಧರ್ಮದ ಬಡವರು ಮಧ್ಯಮ ವರ್ಗದವರ ಮಹಿಳೆಯರಿಗೆ ಈ ಸೌಲಭ್ಯ ತಲುಪುತ್ತಿದೆ. ಜೊತೆಗೆ ಕೋಟಿ ಕೋಟಿ ಮನೆಗೆ ಉಚಿತ ವಿದ್ಯುತ್ ಮತ್ತು ಅಕ್ಕಿ ಹಾಗೂ ಅಕ್ಕಿಯ ಹಣವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ