Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ ಕೃಷ್ಣಪ್ಪ ಸ್ಥಾಪಿತ ) ಕಾರ್ಯಕರ್ತರು ಮಂಡ್ಯನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಡ್ಯನಗರದ ಸಂಜಯ ವೃತ್ತದಿಂದ ಸಮಿತಿಯ ಕಾರ್ಯಕರ್ತರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗ ಆರು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಸಮೀಕ್ಷೆ ನಡೆಸಿ ಮಾದಿಗ ಸಮುದಾಯಕ್ಕೆ ಶೇ.6, ಹೊಲಯ ( ಬಲಗೈ ) ಸಮುದಾಯಕ್ಕೆ ಶೇ,5, ಭೋವಿ, ಲಂಬಾಣಿ, ಕೊರಮ ಕೊರಚ ಜಾತಿಗೆ ಶೇ. 3 ಮತ್ತು ಇತರೆ ಜಾತಿಗೆ ಶೇ 1 ರಷ್ಟು ಸವಲತ್ತು ನೀಡಬೇಕು ಎಂದು ವರದಿ ನೀಡಲಾಗಿದೆ. ಆದರೆ ಪ್ರಸ್ತುತ ಸಮಾಜದಲ್ಲಿ ಸಣ್ಣ ಮೀನುಗಳನ್ನು ದೊಡ್ಡ ಮೀನು ನುಂಗಿ ಹಾಕಿದಂತೆ ರಾಜಕೀಯ ಹಿತಾ ಶಕ್ತಿ ಗಾಗಿ ಪರಿಶಿಷ್ಟ ಜಾತಿಗೆ ಕೆಲವು ಸ್ಪರ್ಶ ಜಾತಿಗಳನ್ನು ಸೇರ್ಪಡೆ ಮಾಡಿ ಶೋಷಿತರ ರಾಜಕೀಯ ಹಕ್ಕು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿ ವರದಿ ಅಂಗೀಕರಿಸುವುದಾಗಿ ಭರವಸೆ ನೀಡಿತ್ತು, ಆದರೆ ಸರ್ಕಾರ ಮಾತಿಗೆ ತಪ್ಪಿದೆ, ಇದೀಗ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ಮತ್ತು ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಹಾಗೊಮ್ಮೆ ಈ ಅಧಿವೇಶನದಲ್ಲಿ ಅಂಗಿಕರಿಸದೆ ಹೋದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ನಂಜುಂಡಸ್ವಾಮಿ, ಎಸ್ ವಿಜಯ್ ಕುಮಾರ್, ಪಳನಿಯಮ್ಮ, ಎಂ. ಎಂ ಮಹೇಶ್, ಸುಲೋಚನಾ, ಮಂಜುಳಾ, ನರಸಿಂಹ, ಕರ್ನಾಟಕ ಜನಶಕ್ತಿ ಸಂಘಟನೆಯ ಎಂ.ಸಿದ್ದರಾಜು, ದಸಂಸ ಮುಖಂಡ ಎಂ ವಿ ಕೃಷ್ಣ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ