Monday, November 23, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿ| 24 ಸ್ಥಳಗಳಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 (NH-275) ರಲ್ಲಿ ಬರುವ 24 ಗ್ರಾಮಗಳ ವ್ಯಾಪ್ತಿಯಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲು ತೀವ್ರ ಅನನೂಕೂಲವಾಗುತ್ತಿದ್ದು ವಿವಿಧ ಸ್ಥಳಗಳಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ವಿಧಾನಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಎಲ್ಲೆಲ್ಲಿ ನಿರ್ಮಾಣ

ಕಣಮಿಣಕಿ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಆಲತ್ತೂರು ಹೊಸದೊಡ್ಡಿ, ಮಾದಪುರ, ದಬನಗುಂಡಾ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಕೆ.ಎಂ.ಎಫ್. ಗೆಜ್ಜಲಗೆರೆ, ಬಿ.ಗೌಡಗೆರೆ, ಬೂದನೂರು (2), ಕಾಳೇನಹಳ್ಳಿ (2), ರಾಗಿಮುದ್ದನಹಳ್ಳಿ, ಸಿದ್ದಾಪುರ, ಗಣಂಗೂರು, ಗೌಡಹಳ್ಳಿ, ಬ್ರಹ್ಮಾಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ ಗ್ರಾಮಗಳಲ್ಲಿ ಪುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.

ಗಮನಕ್ಕೆ ಬಂದಿದೆ

NH-275ರ ಸರ್ವೀಸ್ ರಸ್ತೆ ಇಕ್ಕೆಲಗಳಲ್ಲಿನ ಡ್ರೈನೇಜ್ ಕಾಮಗಾರಿಗಳು ಅಪೂರ್ಣ ಮತ್ತು ಅವೈಜ್ಞಾನಿಕವಾಗಿರು ವುದು, ರೋಡ್ ಹಂಪ್ಸ್ ಅವೈಜ್ಞಾನಿಕವಾಗಿರುವುದು ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಕೋಡಿಶೆಟ್ಟಿಪುರ, ಗಣಂಗೂರು ಮತ್ತು ಇಂಡುವಾಳು ಗ್ರಾಮಗಳಲ್ಲಿ NH-275ರ ಸರ್ವೀಸ್ ರಸ್ತೆಯಲ್ಲಿ ಅಪೂರ್ಣವಾದ ಚರಂಡಿ ನಿರ್ಮಾಣ ಕಾಮಗಾರಿಯನ್ನು ರಿಯಾಯಿತಿದಾರರಿಂದ ಈಗಾಗಲೇ ಆರಂಭಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೇ ಅಂಡರ್ ಪಾಸ್ ಸ್ಥಳಗಳ ಬಳಿ ಸರ್ವೀಸ್ ರಸ್ತೆಯಲ್ಲಿನ ಅವೈಜ್ಞಾನಿಕ ರಸ್ತೆ ಹುಬ್ಬುಗಳನ್ನು ಗುರುತಿಸುವುದು ಮತ್ತು ಸರಿಪಡಿಸುವ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಶೀಘ್ರದಲೇ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ.

ಅಪಘಾತ ಸ್ಥಳಗಳು

NH-275ರಲ್ಲಿ ಬರುವ ಮಂಡ್ಯ ಜಿಲ್ಲೆಯ ಮದ್ದೂರು, ಉಮ್ಮಡಹಳ್ಳಿ ಗೇಟ್, ಇಂಡುವಾಳು, ಸುಂಡಹಳ್ಳಿ, ರಾಗಿಮುದ್ದನಹಳ್ಳಿ, ಗರುಡನ ಉಕ್ಕಡ ಈ ಸ್ಥಳಗಳನ್ನು ಅಪಘಾತ ಸಂಭವಿಸಬಹುದಾದ ಸ್ಥಳಗಳು ಎನ್ನಲಾಗಿದ್ದು, ಈ ಸ್ಥಳಗಳಲ್ಲಿ ಸರಾಸರಿ ಎತ್ತರ ಹೆಚ್ಚಿಸುವುದರ ಜೊತೆಗೆ (raising of median height) ಹೆಚ್ಚುವರಿ ಸೂಚನಾ ಫಲಕಗಳು ಮತ್ತು ಇತರೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆಯನ್ನು 2023ರ ನವೆಂಬರ್ ನಲ್ಲಿ ನೀಡಲಾಗಿದೆ. 2024ರ ಜನವರಿಯಲ್ಲಿ ಕೆಲಸ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ