ಮಂಡ್ಯ ಜಿಲ್ಲೆ ಹಾಗೂ ರಾಜ್ಯಾದ್ಯಂತ ನಡೆಯುತ್ತಿರುವ ಹೆಣ್ಣುಭ್ರೂಣ ಹತ್ಯೆ ಖಂಡಿಸಿ ಮಹಿಳಾ ಮಕ್ಕಳ ಧ್ಚನಿ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿನಿಯರು ಮದ್ದೂರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮದ್ದೂರು ಪಟ್ಟಣದ ಪುರಸಭೆ ಕಚೇರಿ ಆವಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ, ಬಳಿಕ ತಾಲೂಕು ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು .
ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿರುವ ಅವಮಾನ ಕೃತ್ಯವನ್ನು ಖಂಡಿಸಿದರಲ್ಲದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಅಧಿಕಾರಿಗಳು ಮತ್ತು ದುಷ್ಟ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಸಂತತಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಿರಂತರವಾಗಿ ಸಾವಿರಾರು ಹೆಣ್ಣು ಭ್ರೂಣ ಹತ್ಯೆ ನಡೆಸಿರುವ ದುಷ್ಟ ಮನೋಭಾವದ ವ್ಯಕ್ತಿಗಳನ್ನು ಮತ್ತು ಸಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರಲ್ಲದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು .
ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹದ್ದಿನ ಕಣ್ಣೀರಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ನಿರಂತರವಾಗಿ ಹೆಣ್ಣು ಭ್ರೂಣ ಪತ್ತೆ ಹಚ್ಚಿ ಅಕ್ರಮವಾಗಿ ನಡೆಸಿಕೊಳ್ಳುತ್ತಿರುವ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾದ ಹೋರಾಟ ರೂಪಿಸುವುದಾಗಿ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮದ್ದೂರು ತಹಸೀಲ್ದಾರ್ ಸೋಮಶೇಖರ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ವೇಳೆ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷ ರಜಿನಿರಾಜ್, ತೆಂಗು ಬೆಳೆಗಾರ ಸಂಘದ ಅಧ್ಯಕ್ಷ ಚಂಸಂದ್ರ ಲಕ್ಷ್ಮಣ, ರಾಜಶೇಖರ್, ಯಶೋದಮ್ಮ, ರೇಣುಕಾ ,ಪ್ರಭಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಹಾಜರಿದ್ದರು.




