Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತಟ್ಟೆ- ಲೋಟ ಪ್ರದರ್ಶಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವೆ ಖಾಯಂಗೆ ಆಗ್ರಹಿಸಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮಂಡ್ಯದಲ್ಲಿ ತಟ್ಟೆ ಲೋಟ ಪ್ರದರ್ಶಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು 8 ದಿನದ ಧರಣಿಯಲ್ಲಿ ತಟ್ಟೆ – ಲೋಟ ಬಡಿಯುವ ಮೂಲಕ ಸರ್ಕಾರ ಅತಿಥಿ ಉಪನ್ಯಾಸಕರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 11,788 ಮಂದಿ ಅತಿಥಿ ಉಪನ್ಯಾಸಕರು 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಬಹುತೇಕ ಎಲ್ಲಾ ಕಾಲೇಜುಗಳಲ್ಲಿ ಶೇ 75ರಷ್ಟು ಅತಿಥಿ ಉಪನ್ಯಾಸಕರಿಂದಲೇ ತರಗತಿಗಳು ನಡೆಯುತ್ತಿದ್ದು ಅತ್ಯುತ್ತಮ ಫಲಿತಾಂಶ ಬಂದಿರುವ ನಿದರ್ಶನಗಳಿವೆ. ಉತ್ತಮ ಸೇವೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು, ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭರವಸೆಯನ್ನು ಉಳಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕ ಎನ್ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬದುಕನ್ನು ಆಳುವ ಸರ್ಕಾರ ಅತಂತ್ರ ಮಾಡಿದೆ, ಅಭದ್ರತೆಯಲ್ಲಿ ಬದುಕುವಂತಾಗಿದೆ, ಎರಡು ದಶಕಗಳ ಕಾಲ ಸೇವೆ ಮಾಡಿದವರಿದ್ದಾರೆ, ನಿವೃತ್ತಿಯ ಅಂಚಿನಲ್ಲಿ ಹಲವರು ಇದ್ದಾರೆ ಆದರೂ ಸಹ ಇವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇವೆ ಖಾಯಂ ಮಾಡುವುದಾಗಿ ಘೋಷಿಸಿತ್ತು, ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರ ಬದುಕು ಹಸನು ಮಾಡಬೇಕು,ವರ್ಷದ 12 ತಿಂಗಳು ವೇತನ ನೀಡಬೇಕು,ಸರ್ಕಾರಿ ಸವಲತ್ತನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕಿ ಕೆ.ಟಿ.ಆಶಾಮಣಿ ಮಾತನಾಡಿ ಸೇವೆಯಲ್ಲಿ ಭದ್ರತೆ ಎಂಬುದು ಇಲ್ಲವಾಗಿದೆ,ಪ್ರತಿ ವರ್ಷ ಬೇರೆ ಬೇರೆ ಕಡೆ ಕೆಲಸ ನಿರ್ವಹಿಸಬೇಕು, ಮುಂದಿನ ವರ್ಷ ನಮಗೆ ಕೆಲಸ ದೊರಕಲ್ಲಿದೆಯೋ ಇಲ್ಲವೊ ಎಂಬ ಆತಂಕದಲ್ಲಿ ದಿನ ಕಳೆಯಬೇಕು. ಕುಟುಂಬ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುವುದು ಹೇಗೆ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದರು.

ಮಂಡ್ಯ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕ ಬಿ.ಆರ್ ಕುಮಾರ್ ಮಾತನಾಡಿ, ಸರ್ಕಾರ ಅತಿಥಿ ಉಪನ್ಯಾಸಕರನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಬೌದ್ಧಿಕ ಅಸ್ಪೃಶ್ಯತೆ ಮಾಡಲಾಗುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರ ಬದುಕಿಗೆ ಆಶಾಕಿರಣವಾಗಲಿ, ಬೌದ್ಧಿಕ ಅಸ್ಪೃಶ್ಯತೆ ಕಳಂಕ ತೊರೆಯಲಿ ಆ ಮೂಲಕ ಬೌದ್ಧಿಕ ವಲಯ ಉನ್ನತಿಯಾಗಲಿ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಜಿ ವಿ ರಮೇಶ್, ಸಂಘದ ಗೌರವಾಧ್ಯಕ್ಷ ಜಿ.ವಿ.ರಮೇಶ್, ಅಧ್ಯಕ್ಷ ಕೆ.ಪರಮೇಶ್, ಉಪಾಧ್ಯಕ್ಷ ಡಾ.ಎಂ.ಎಸ್.ಚಲುವರಾಜು, ಸಂಘದ ಕಾರ್ಯದರ್ಶಿ ಡಾ.ಗಣೇಶ್, ನಂದಿನಿ ಬಿ ಆರ್, ಉಮಾಕಾಂತ್ ಬೇಬಿಕಲಾ, ನಾಗರತ್ನ ಜೆ.ಎಂ, ಭಾರ್ಗವಿ.ಬಿ.ಆರ್, ಅರ್ಚನಾಶ್ರೀ, ಸೌಭಾಗ್ಯ, ಡಿ.ಇ.ಪವಿತ್ರಾ ನೇತೃತ್ವ ವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ