Tuesday, June 25, 2024

ಪ್ರಾಯೋಗಿಕ ಆವೃತ್ತಿ

ಪಕ್ಷಾಂತರಿಗಳು ಪ್ರಜಾಪ್ರಭುತ್ವ ದ್ರೋಹಿಗಳು

ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಾನು ಪಕ್ಷಾಂತರ ಆಗಿದ್ದರೆ ಸಚಿವ, ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಿದ್ದೆ‌. ಪಕ್ಷಾಂತರಿಗಳು ಪ್ರಜಾಪ್ರಭುತ್ವ ದ್ರೋಹಿಗಳು ಪಕ್ಷಾಂತರಿಗಳು ಇನ್ನೆಂದೂ ಜೀವನದಲ್ಲಿ ಚುನಾವಣೆಗೆ ನಿಲ್ಲಬಾರದು ಎಂಬ ಕಾನೂನು ತರಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಜೀವನದಲ್ಲಿ ಸ್ವಲ್ಪ ಬದಲಾವಣೆ ಆಗಿದ್ದರೂ ಬಹಳ ದೊಡ್ಡ ಸ್ಥಾನದಲ್ಲಿ ಇರುತ್ತಿದ್ದೆ. ನಾನು ಐದು ಬಾರಿ ಗೆದ್ದಿದ್ದೇನೆ. ಪಕ್ಷಾಂತರ ಆಗಬಾರದೆಂದು ಪ್ರಾಮಾಣಿಕವಾಗಿ ದಶಕಗಳ ಕಾಲ ಕನ್ನಡ ನಾಡು,ನುಡಿಯ ಹೆಸರಿನಲ್ಲಿ ರಾಜಕೀಯ‌ ಮಾಡಿದ್ದೇನೆ.ಇಂದು ಪಕ್ಷಾಂತರಿಗಳಿಗೆ ಮರ್ಯಾದೆ ಕೊಡಲಾಗುತ್ತಿದೆ. ಪಕ್ಷಾಂತರಿಗಳು ಪ್ರಜಾಪ್ರಭುತ್ವ ದ್ರೋಹಿಗಳು ಎಂದು ಗುಡುಗಿದರು.

ರಾಷ್ಟ್ರ ಕವಿ ಕುವೆಂಪು ಅವರು ಕರುನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ. ಇಂದು ಶಾಂತಿಯ ತೋಟದಲ್ಲಿ ಪಾಳೇಗಾರಿಕೆ ನಡೆಯುತ್ತಿದೆ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಹಾಗೂ ಆಜಾನ್ ಘಟನೆಗಳಿಂದ ರಾಜ್ಯದಲ್ಲಿ ಅಪಾಯದ ಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ, ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದ ಗೌರವ ಉಳಿಸಬೇಕೆಂದು ಆಗ್ರಹಿಸಿದರು.

ರಾಜಕಾರಣದ ವ್ಯಾಪಾರ

ಇಂದು ರಾಜಕಾರಣ ವ್ಯಾಪಾರೀಕರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಗೌರವಯುತ ಸ್ಪರ್ಧೆ ನಡೆಯಬೇಕು. ಆದರೆ, ವ್ಯಾಪಾರಕ್ಕೆ ಒತ್ತು ಕೊಟ್ಟಿದ್ದಾರೆ.
ದೇಶದ ರಾಜಕಾರಣ ಹಣವಂತ, ರಿಯಲ್ ಎಸ್ಟೇಟ್ ಅಥವಾ ದರೋಡೆಕೋರರು ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಪ್ರವೇಶಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ಕಳೆದ ಹೊರರಾಜ್ಯದವರ ರಾಜಕೀಯ ಪ್ರವೇಶಕ್ಕೆ ಕರ್ನಾಟಕ ವೇದಿಕೆಯಾಗುತ್ತಿರುವುದು ದುರಂತ. ನಿರ್ಮಲಸೀತಾರಾಮನ್ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಕೇರಳ, ಆಂಧ್ರ, ತಮಿಳಿಗರ ಪಾರುಪತ್ಯ ರಾಜಕಾರಣದಲ್ಲಿ ಹೆಚ್ಚಾಗುತ್ತಿದೆ. ರಾಜ್ಯಪಾಲರ ಹಿಂದಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸುವ ಧೈರ್ಯ ಇಂದಿನ ಜನಪ್ರತಿನಿಧಿಗಳಿಗಿಲ್ಲದಿರುವುದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು.

ಹರಾಜು ಹಾಕುತ್ತಿದ್ದಾರೆ

ರಾಜ್ಯಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಗಳು ಆತ್ಮಸಾಕ್ಷಿಯ ಮತ ಕೇಳುತ್ತಿವೆ. ಆತ್ಮಸಾಕ್ಷಿ ಎಂದರೆ ಇಂದು ಹರಾಜು ಎಂಬಂತಾಗಿದೆ. ಮೂರು ಪಕ್ಷಗಳು ಪ್ರಾಮಾಣಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದರು.

ಆರ್ ಎಸ್ ಎಸ್ ಸಿದ್ಧಾಂತ ತುರುಕುವುದಲ್ಲ

ಪಠ್ಯಪುಸ್ತಕದ ತೀಟೆ ಜಗಳ ಸರ್ಕಾರಕ್ಕೆ ಅಗತ್ಯವಿರಲಿಲ್ಲ. ನಾಡಿನ ಜನರ ವಿರೋಧದ ನಡುವೆಯೂ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ. ಪಠ್ಯ ಬದಲಾವಣೆಯ ನೇತೃತ್ವವನ್ನು ಪ್ರಾಮಾಣಿಕ ಹಾಗೂ ಪರಿಶುದ್ದ ವ್ಯಕ್ತಿ ನಿರ್ವಹಿಸಬೇಕು.ಪಠ್ಯ ಪುಸ್ತಕ ಪರಿಷ್ಕರಣೆ ಅಂದರೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಸಿದ್ಧಾಂತಗಳನ್ನು ತುರುಕುವುದಲ್ಲ ಎಂದು ಲೇವಡಿ ಮಾಡಿದರು.

ಹುಚ್ಚನಂತೆ ಪ್ರತಾಪ್ ಸಿಂಹ ವರ್ತನೆ

ಮೈಸೂರು ಸಂಸದ ಪ್ರತಾಪ್ ಸಿಂಹ ಹುಚ್ಚನಂತೆ ಮಾತನಾಡುತ್ತಾರೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ಎಂ.ಎಸ್.ಗುರುಪಾದಸ್ವಾಮಿ, ಯಶೋಧರ ದಾಸಪ್ಪರಂತಹ ಸಜ್ಜನ ವ್ಯಕ್ತಿಗಳು ಪ್ರತಿನಿಧಿಸಿದ್ದಾರೆ. ಸಂಸದರಿಗೆ ಭಾಷಾ ಹಿಡಿತವಿರಬೇಕು. ಟಿಪ್ಪು ಇತಿಹಾಸ ಅರಿಯದೆ ಟಿಪ್ಪು ಎಕ್ಸ್ ಪ್ರೆಸ್ ಬದಲಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಾಯಿಸಿ ಎಂಬ ಅವರ ಹೇಳಿಕೆ ಸರಿಯಲ್ಲ. ಹೆಸರು ಬದಲಾಯಿಸಲು ಮುಂದಾದರೆ ಕ್ರಾಂತಿ ಆಗುತ್ತದೆ ಎಂದು ಎಚ್ಚರಿಸಿದರು.

ಟಿಪ್ಪುಸುಲ್ತಾನ್ ಅವರನ್ನು ಬ್ರಿಟಿಷರೇ ಮೈಸೂರು ಹುಲಿ ಎಂದು ಬಿಂಬಿಸಿದ್ದಾರೆ. ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಜಾಗದ ಬಗ್ಗೆ ವಿವಾದ ಅನಗತ್ಯ.ಆರ್ ಎಸ್ ಎಸ್ ಮೋಹನ್ ಭಾಗವತ್ ಹೇಳಿದಂತೆ ಮಸೀದಿಯಲ್ಲಿ ಲಿಂಗವನ್ನು ಹುಡುಕುವ ಕೆಲಸ ಕೈಬಿಡಬೇಕೆಂದರು.

ನನ್ನ ಆಯ್ಕೆ ಜನರಿಗೆ ಬಿಟ್ಟಿದ್ದೇನೆ

ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನ್ನ ಗೆಲುವಿನ ಅಗತ್ಯದ ಬಗ್ಗೆ ಬುದ್ದಿವಂತರಾದ ಪದವೀಧರರು, ಶಿಕ್ಷಕರು ಹಾಗೂ ವಕೀಲರು ನಿರ್ಧರಿಸಬೇಕು. ವಾಟಾಳ್ ಇಂದಿನ ಅಗತ್ಯವೇ ಎಂದು ಮತದಾರರು ತೀರ್ಮಾನಿಸಿ ಮತ ನೀಡಬೇಕೆಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!